ಮೈಸೂರು: ಅಪೂರ್ವ ಸ್ನೇಹ ಬಳಗ ಹಾಗೂ ಕೃಷ್ಣರಾಜ ಯುವ ಬಳಗದ ಪದಾಧಿಕಾರಿಗಳು ಚಿತ್ರನಟ ಪುನೀತ್ ನಿಧನಕ್ಕೆ ಶನಿವಾರ ಮೈಸೂರಲ್ಲಿ ಸಂತಾಪ ಸೂಚಿಸಲಾಯಿತು.
ಚಿತ್ರನಟ ಪುನೀತ್ ರಾಜ್‍ಕುಮಾರ್ ನಿಧನದಿಂದ ಕನ್ನಡ ನಾಡು ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ವೈ ಡಿ ರಾಜಣ್ಣ ವಿಷಾದ ವ್ಯಕ್ತಪಡಿಸಿದರು.
ಚಾಮುಂಡಿಪುರಂ ಸರ್ಕಲ್ ನಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಕಸ ತೆಗೆಯುವ ಬಳಗ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಸಿ, ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಡಿ. ರಾಜಣ್ಣ ಮಾತನಾಡಿದರು.
ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಾದರಿ ಕಲಾವಿದರಾಗಿ ಇದ್ದಂಥವರು. ಚಿತ್ರರಂಗದ ಅಭಿನಯದ ಜೊತೆಗೆ ಸಾಮಾಜಿಕವಾಗಿ ಹಲವು ಸಂಘ ಸಂಸ್ಥೆಗಳಿಗೆ ಒತ್ತಾಸೆಯಾಗಿ ನಿಂತಿದ್ದು ಅಂಥವರು ತಮ್ಮ ವೃತ್ತಿ ಬದುಕಿನ ಜೊತೆಗೆ ಕನ್ನಡದ ನಾಡುನುಡಿಯ ಅಭಿವೃದ್ದಿಗೂ ಕೂಡ ತಮ್ಮನ್ನು ಸಮರ್ಪಿಸಿಕೊಂಡವರು. ಅವರ ಮಾದರಿಯನ್ನು ಗುರುತಿಸಿ ಕರ್ನಾಟಕ ಸರ್ಕಾರ ಪ್ರತಿ ವರ್ಷ ಒಬ್ಬ ಯುವ ನಾಯಕ ನಟರಿಗೆ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ರಾಜ್ಯಮಟ್ಟದ ಯುವ ನಾಯಕ ಕನ್ನಡ ರಾಜ್ಯ ಪ್ರಶಸ್ತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ರಾದ ನಾರಾಯಣ್ ಗೌಡ ಮಾತನಾಡಿ, ನಟ ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ದೊಡ್ಡಸಾಧನೆ ಮಾಡಿ ಕನ್ನಡ ಚಿತ್ರರಂಗದ ಜೊತೆಗೆ ಸಮಾಜ ಸೇವೆಯಲ್ಲಿ ಸಹ ತಮ್ಮನ್ನು ತೊಡಗಿಸಿಕೊಂಡಿದ್ದರು. ಎಲೆಮರೆಕಾಯಿಯಂತೆ ಅನಾಥಾಶ್ರಮ, ವೃದ್ಧಾಶ್ರಮ, ಶಾಲೆಗಳನ್ನು ನಡೆಸುತ್ತಾ ಬಂದಿದ್ದರು. ಜೊತೆಗೆ ನೇತ್ರದಾನದ ಬಗ್ಗೆ ರಾಜ್ಯದಲ್ಲಿ ಅರಿವು ಮೂಡಿಸುವ ಜೊತೆಗೆ ತಾವೂ ನೇತ್ರದಾನ ಮಾಡಿ ಹಲವರಿಗೆ ಪ್ರೇರೇಪಣೆಯಾಗಿದ್ದಾರೆಂದರು.
ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಮಾತನಾಡಿ, ಪುನೀತ್ ಅವರು ಪ್ರಚಾರ ಬಯಸದೆ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದರು. ಇಂತಹ ನಟನನ್ನು ನಾಡು ಕಳೆದುಕೊಂಡಿದ್ದು ತುಂಬಲಾಗದ ನಷ್ಟವಾಗಿದೆ ಎಂದು ವಿಷಾದಿಸಿದರು.
ಸಂತಾಪ ಸಭೆಯಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ರಾಜ್ಯ ನಿರ್ದೇಶಕ ಎಂ ಆರ್ ಬಾಲಕೃಷ್ಣ, ಮೂಡಾ ಸದಸ್ಯರಾದ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ರಾಜ್ಯ ನಿರ್ದೇಶಕಿ ರೇಣುಕ ರಾಜ್, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಜ್ಯೋತಿ ರೇಚಣ್ಣ, ನಗರ ಪಾಲಿಕಾ ಸದಸ್ಯ ಜಗದೀಶ್, ಕೃಷ್ಣರಾಜ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಬಿಜೆಪಿ ಮುಖಂಡ ಕೇಬಲ್ ಮಹೇಶ್, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್, ವಿಕ್ರಂ ಅಯ್ಯಂಗಾರ್, ರವಿತೇಜ, ಸುಚೇಂದ್ರ, ವಿನಯ್ ಕಣಗಾಲ್, ನವೀನ್ ಕೆಂಪಿ, ರಂಗನಾಥ್ ಹಾಜರಿದ್ದರು.

