ಹಿಂದೂಗಳ ಮೇಲಿನ ದೌರ್ಜನ್ಯ ವಿರೋಧಿಸಿ ಮೈಸೂರಲ್ಲಿ ದಂಡಿನ ಮೆರವಣಿಗೆ

ಮೈಸೂರು: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ನಡೆದ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ರಾಷ್ಟ್ರೀಯ ಹಿಂದೂ ಸಮಿತಿ ಹಾಗೂ ವಿಕೆಎಸ್ ಫೌಂಡೇಶನ್ ವತಿಯಿಂದ ಮೈಸೂರಿನ ವಿವೇಕಾನಂದ ವೃತ್ತದ ವಿವೇಕಾನಂದ ಪ್ರತಿಮೆ ಬಳಿ ಗುರುವಾರ ದಂಡಿನ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಮ್ಮ ನೆರೆಯ ದೇಶಗಳಾದ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳ ಮೇಲಿನ ದೌರ್ಜನ್ಯ ಮಿತಿಮೀರುತ್ತಿ ದ್ದರೂ ಜಾಗತಿಕವಾಗಿ ವಿಶ್ವಸಂಸ್ಥೆ ಹಾಗೂ ಇನ್ನಾವುದೇ ಮಾನವ ಹಕ್ಕುಗಳ ಸಂಸ್ಥೆಗಳು ದನಿಯೆತ್ತದೆ ಜಾಣಕಿವುಡು ಪ್ರದರ್ಶಿಸುತ್ತಿವೆ. ಎಲ್ಲಾ ಹಿಂದೂಪರ ಸಂಸ್ಥೆಗಳು ಒಗ್ಗೂಡಿ ಹಿಂದುಗಳ ಮೇಲಿನ ಹೊರದೇಶಗಳ ಅದರಲ್ಲೂ ತಾಲಿಬಾನಿಗಳ ಮನಸ್ಥಿತಿಯ ಉಗ್ರರು ನಡೆಸುತ್ತಿರುವ ದೌರ್ಜನ್ಯದ ಹುಟ್ಟಡಗಿಸಲು ಇಲ್ಲಿಂದಲೇ ಸಂದೇಶ ಕಳುಹಿಸಲು ಈ ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾ ಸಂಧರ್ಭದಲ್ಲಿ ಮಾತನಾಡಿದ ಯುವಮುಖಂಡ ವಿಕಾಸ್ ಶಾಸ್ತ್ರಿ, ಹಿಂದೂಗಳ ಮೇಲೆ ಪ್ರತಿದಿನ ನಡೆಯುತ್ತಿರುವ ದೌರ್ಜನ್ಯವನ್ನು ನೋಡುತ್ತ ಬಂದಿದ್ದೇವೆ. ಈ ರೀತಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಹಿಂದೂ ವಿರೋಧಿ ಚಟುವಟಿಕೆಗಳನ್ನು ಈ ತಕ್ಷಣ ವಿಶ್ವಸಂಸ್ಥೆ ಮಧ್ಯಪ್ರವೇಶಿಸಿ ಕ್ರಮ ಕೈಗೊಳ್ಳಲು ಆಗ್ರಹಿಸುತ್ತೇನೆ ಎಂದರು.

ಧರಣಿಯಲ್ಲಿ ಭಾಗವಹಿಸಿದ್ದ ಹಿಮಾಲಯ ಫೌಂಡೇಶನ್ ಅಧ್ಯಕ್ಷ ಎನ್. ಅನಂತ ಅವರು ಮಾತನಾಡಿ, ಬಾಂಗ್ಲಾದೇಶದಲ್ಲಿ ಉಗ್ರಗಾಮಿಗಳಿಂದ ಸಂಭವಿಸುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಕ್ರಮ ಕೈಗೊಳ್ಳಲೇಬೇಕು. ಪ್ರಧಾನಿಗಳು ಸೂಕ್ತ ಕ್ರಮ ಕೈಗೊಂಡು ಇಂತಹ ದುಷ್ಕೃತ್ಯಗಳಿಗೆ ಅಂತ್ಯ ಹಾಡಬೇಕು, ಪ್ರತಿಯೊಬ್ಬ ಭಾರತೀಯರು ಈ ಘಟನೆಯನ್ನು ಖಂಡಿಸಿ ಧ್ವನಿಯೆತ್ತಬೇಕು ಎಂದರು.

ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ಪ್ರದೀಪ್, ತೇಜಸ್, ರಾಮ್ ಆರ್ ಗೌಡ, ವಿನಯ್, ಮುನ್ನ, ಚೇತನ್, ನವೀನ್ ಅಭಿಷೇಕ್, ಮನು ಮತ್ತಿತರರು ಉಪಸ್ಥಿತರಿದ್ದರು.