ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರು ದಲಿತ ಸಮಾಜಕ್ಕೆ ಅಗೌರವ ತರುವ ಕೆಲಸವನ್ನು ಮಾಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ಹೇಳಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಿದ್ದರಾಮಯ್ಯನವರು ದುರುದ್ದೇಶದಿಂದ ಯಾವುದೇ ಮಾತನ್ನು ಆಡಿಲ್ಲ ಎಂದು ಅವರು ತಿಳಿಸಿದರು.
ಮಾದಿಗ ಜನಾಂಗದ ಸಮಾವೇಶದಲ್ಲಿ ಮಾತನಾಡತಕ್ಕಂತಹ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಕೆಲವು ನಾಯಕರು ಸ್ವಾರ್ಥಕ್ಕೋಸ್ಕರ, ಸ್ಥಾನಮಾನಕ್ಕೋಸ್ಕರ ಬಿಜೆಪಿ ಸೇರಿದ್ದಾರೆ ಎಂದಿದ್ದರು. ಅದನ್ನು ತಿರುಚಿ ಬಿಜೆಪಿ ಮುಖಂಡರು ದಲಿತರನ್ನು ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ ಎಮದು ಧೃವನಾರಾಯಣ್ ಹೇಳಿದರು.
ಅಂಬೇಡ್ಕರ್ ಬಗ್ಗೆ ಗೌರವ ಇದ್ದರೆ ದಲಿತರ ಸ್ಥಿತಿಗತಿಗಳ ಬಗ್ಗೆ ಅವರ ಏಳಿಗೆಗಾಗಿ ಕಾನೂನು ತನ್ನಿ, ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ಎಲ್ಲ ನಿಗಮಗಳಲ್ಲಿನ ಎಲ್ಲ ಸಾಲವನ್ನು ಏಕಕಾಲದಲ್ಲಿ ಮನ್ನಾ ಮಾಡಿದರು. ನೀವು ಕೂಡ ಇಷ್ಟು ವರ್ಷ ಅಧಿಕಾರದಲ್ಲಿದ್ದೀರಿ, ನೀವ್ಯಾಕೆ ಸಾಲಮನ್ನಾ ಮಾಡಿಲ್ಲ ಎಂದು ಧೃವನಾರಾಯಣ್ ಪ್ರಶ್ನಿಸಿದರು.
ಧರ್ಮ ಧರ್ಮಗಳಲ್ಲಿ ಕಂದಕ ಹುಟ್ಟುಹಾಕುವುದು, ಈಗ ಸಮಾಜ ಜಾತಿಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಗಾವಲಾಗಿ ನಿಂತಿವೆ. ಅವುಗಳನ್ನು ಒಡೆಯುವ ತಂತ್ರಗಾರಿಕೆ ನಡೆದಿದೆ. ಕೇವಲ ಒಂದು ವ್ಯಕ್ತಿಗಳಿಗೆ ಹೇಳಿದ ಮಾತನ್ನು ಇಡೀ ದಲಿತ ಸಮುದಾಯಕ್ಕೆ ಹೇಳುವಂತದ್ದು ಎನ್ನುವ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಆಯೂಬ್ ಖಾನ್, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಹೆಚ್.ಎ.ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

