ಮೈಸೂರು: ಮೈಸೂರಲ್ಲಿ ಇನ್ನು ಮುಂದೆ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿಕೊಂಡು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ಮೈಸೂರು ನಗರ ಪೊಲೀಸರಿಂದ ಸಂಚಾರ ಸುರಕ್ಷತಾ ಅಭಿಯಾನ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಹೆಲ್ಮೆಟ್ ಜಾಗೃತಿ ಕಾರ್ಯಕ್ರಮವನ್ನು ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿತ್ತು. ಪತ್ರಕರ್ತರಿಗೆ ಹೆಲ್ಮೆಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಚಾಲನೆ ನೀಡಿ ಮಾತನಾಡಿದರು.
ಮೈಸೂರಲ್ಲಿ ಇನ್ನು ಮುಂದೆ ಹೆಲ್ಮೆಟ್ ಧರಿಸುವುದು ಕಡ್ಡಾಯ. ಧರಿಸದೇ ಬೈಕ್ ಚಲಾಯಿಸಿಕೊಂಡು ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹೆಲ್ಮೆಟ್ ಪರಿಶೀಲನೆಗೆ ವಿಶೇಷ ತಂಡ ರಚನೆ ಮಾಡಲಾಗುತ್ತದೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದರು.
ದ್ವಿಚಕ್ರ ವಾಹನ ಚಲಾಯಿಸುವ ಪ್ರತಿಯೊಬ್ಬರೂ ಕಡ್ಡಾಯವಾಗಿ ಹೆಲ್ಮೆಟ್ ಧರಸುವಂತೆ ಅವರು ಮನವಿ ಮಾಡಿದರು.
ಸಂಚಾರ ನಿಯಮ ಪಾಲಿಸಿದರೆ ಅಪಘಾತ ತಪ್ಪಿಸಬಹುದು. ಕೋವಿಡ್ ನಿಂದ ಕಠಿಣ ನಿಯಮಗಳನ್ನು ತರಲು ಸಾಧ್ಯವಾಗಲಿಲ್ಲ. ಇನ್ಮುಂದೆ ಹೆಲ್ಮೆಟ್ ಕಡ್ಡಾಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಕೇವಲ ದಂಡ ಸಂಗ್ರಹ ನಮ್ಮ ಉದ್ದೇಶವಲ್ಲ, ಸಾರ್ವಜನಿಕರ ಸಂಚಾರ ನಿಯಮದ ಜಾಗೃತಿ ಮುಖ್ಯ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಪಿ ಗೀತಾಪ್ರಸನ್ನ, ಟ್ರಾಫಿಕ್ ಎಸಿಪಿ ಗಂಗಾಧರ್ ಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಉಪಸ್ಥಿತರಿದ್ದರು.

