ವಿಧಾನ ಪರಿಷತ್ ಚುನಾವಣೆ: ವೇಳಾಪಟ್ಟಿ ಪ್ರಕಟ

ಮೈಸೂರು, ನ.10: ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾವಣೆ 2021 ಸಂಬಂಧ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ತಕ್ಷಣದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ವಿಧಾನ ಪರಿಷತ್ತಿಗೆ 20-ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ಚುನಾಯಿತರಾಗಿದ್ದ ಆರ್ ಧರ್ಮಸೇನ ಮತ್ತು ಎಸ್. ನಾಗರಾಜು (ಸಂದೇಶ್ ನಾಗರಾಜು) ರವರ ಅವಧಿಯು 05-01-2022 ಕ್ಕೆ ಮುಕ್ತಾಯಗೊಳ್ಳಲಿದ್ದು ಸದರಿ ಸದಸ್ಯ ಸ್ಥಾನಕ್ಕೆ ಚುನಾವಣೆಯನ್ನು ನಡೆಸಲು ಭಾರತ ಚುನಾವಣಾ ಆಯೋಗವು ಅಧಿಸೂಚನೆ ಹೊರಡಿಸಿದೆ.
ಮೈಸೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಗಳು ಒಳಪಡುತ್ತದೆ. ಮೈಸೂರು ಜಿಲ್ಲಾಧಿಕಾರಿಗಳು ಚುನಾವಣಾಧಿಕಾರಿಗಳಾಗಿದ್ದು, ಅಪರ ಜಿಲ್ಲಾಧಿಕಾರಿಗಳು ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆಯ ರವರು ಸಹಾಯಕ ಚುನಾವಣಾಧಿಕಾರಿಗಳಾಗಿರುತ್ತಾರೆ.

ನ.16ರಂದುಅಧಿಸೂಚನೆಯನ್ನು ಹೊರಡಿಸಲಾಗುತ್ತಿದ್ದು, ನ.23 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.
ನ.24ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ನ.26 ಕೊನೆಯ ದಿನವಾಗಿದೆ.
ಡಿ.19ರಂದು ಮತದಾನ ನಡೆಯಲಿದ್ದು ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಮತ ಚಲಾಯಿಸಲು ಅವಕಾಶ ವಿದೆ.
ಡಿ.14ರಂದು ಮತಗಳ ಎಣಿಕೆ ನಡೆಯಲಿದೆ. ಡಿ.16ರಂದು ಚುನಾವಣೆ ಮುಕ್ತಾಯವಾಗಲಿದೆ.

ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವುದು ಹಾಗೂ ಮಾದರಿ ನೀತಿ ಸಂಹಿತೆಯು ಈ ತಕ್ಷಣದಿಂದಲೇ ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಜಿಲ್ಲೆಯಾದ್ಯಾಂತ ಜಾರಿಯಲ್ಲಿರುತ್ತದೆ ಎಂದು ಚುನಾವಣಾಧಿಗಳು ತಿಳಿಸಿದ್ದಾರೆ.