ಓಬವ್ವರ ಶೌರ್ಯ ಮಾತೃ ಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು -ಹೇಮಂತ್ ಕುಮಾರ್ ಗೌಡ

ಮೈಸೂರು: ಯುವ ಭಾರತ್ ಸಂಘಟನೆ ವತಿಯಿಂದ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸ್ವತಂತ್ರ ಹೋರಾಟಗಾರರ ಉದ್ಯಾನ ವನದಲ್ಲಿ ವೀರವನಿತೆ ಒನಕೆ ಓಬವ್ವ ಸ್ಮರಣೋತ್ಸವ ಅಂಗವಾಗಿ ಗುರುವಾರ ವಿವಿಧ ಜಾತಿಗಳ ಸಸಿಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ,
ಓಬವ್ವನವರ ಶೌರ್ಯ ಮಾತೃ ಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು, ತನ್ನ ಜನರು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಅವರು ತೋರಿದ ಧೈರ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅವರು ನಾರಿಶಕ್ತಿಯ ಪ್ರತೀಕ ಎಂದು ತಿಳಿಸಿದರು.

ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿರುವ ಐತಿಹಾಸಿಕ ಸ್ಥಳಗಳಲ್ಲಿ ಚಿತ್ರದುರ್ಗವೂ ಒಂದು. ಚಿತ್ರದುರ್ಗ ಎಂದಾಕ್ಷಣ ನೆನಪಾಗುವುದೇ ಹೈದರಾಲಿಯ ಸೈನ್ಯದೊಂದಿಗೆ ಏಕಾಂಗಿಯಾಗಿ ಹೋರಾಡಿದ ವೀರವನಿತೆ ಒನಕೆ ಓಬವ್ವ. ಆಕೆಯ ಸಾಹಸದ ಕತೆ ಎಂದಿಗೂ ಅಜರಾಮರ. ಅಂತಹ ಧೀರ ಮಹಿಳೆ ಜನಿಸಿದ ನಾಡಿನಲ್ಲಿ ನಾವಿರುವುದು ಬಹಳ ಹೆಮ್ಮೆಯ ವಿಚಾರ ಎಂದರು.

ಒನಕೆ ಓಬವ್ವ ಜಯಂತಿಗೆ ಸರ್ಕಾರ ಆದೇಶಿಸಿರುವುದು ಸ್ವಾಗತಾರ್ಹ. ಚಿತ್ರದುರ್ಗದ ಇತಿಹಾಸದಲ್ಲಿ ಈ ಮಹಾತಾಯಿಯ ಹೆಸರು ಅಜರಾಮರ. ಕನ್ನಡ ನಾಡಿನ ನೂರಾರು ವೀರಾಗ್ರಣಿಯರಲ್ಲಿ ನಮ್ಮ ಓಬವ್ವ ಕೂಡಾ ಸೇರಿದ್ದಾರೆ. ಆದರೆ ಯಾವುದೇ ಜಯಂತಿಗೆ ರಜೆ ನೀಡದೇ ಆಯಾ ಸಾಧಕರ ಮಹತ್ವದ ಬಗ್ಗೆ ಶಾಲಾ ಮಕ್ಕಳಾದಿಯಾಗಿ ಸಾರ್ವಜನಿಕರೂ ಅರ್ಥೈಸಿಕೊಂಡಾಗ ಆ ಜಯಂತಿ ಸಾರ್ಥಕ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಮೂಡಾ ಸದಸ್ಯರಾದ ಲಕ್ಷ್ಮೀದೇವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ರೇಣುಕಾ ರಾಜ್, ಮೃಗಾಲಯ ಪ್ರಾಧಿಕಾರದ ನಿರ್ದೇಶಕ ಜ್ಯೋತಿ ರಚನಾ, ಯುವ ಭಾರತ ಸಂಘಟನೆಯ ಅಧ್ಯಕ್ಷ ಜೋಗಿ ಮಂಜು, ಎಸ್ ಎನ್ ರಾಜೇಶ್, ಮಹೇಂದ್ರ, ಯುವ ಭಾರತ್ ಸಂಘಟನೆ ಪದಾಧಿಕಾರಿಗಳಾದ ರಾಜು, ಚಕ್ರಪಾಣಿ, ಸುಚೇಂದ್ರ, ವಿಜಯ್ ಕುಮಾರ್, ಹರ್ಷಿತಾ, ಸಂತೃಪ್ತಿ ಹಾಗೂ ಇನ್ನಿತರರು ಹಾಜರಿದ್ದರು.