ಸಾಂಕ್ರಾಮಿಕ ರೋಗ ಬಾಧಿಸದಂತೆ ನೋಡಿಕೊಳ್ಳಿ – ಡಾ.ಕೆ.ಹೆಚ್. ಪ್ರಸಾದ್

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಪ್ರತಿಯೊಬ್ಬರೂ ತಮ್ಮ ಮನೆಯ ನೀರಿನ ಟ್ಯಾಂಕ್, ಸಂಪ್ ಸ್ವಚ್ಛಗೊಳಿಸುವ ಮೂಲಕ ಸೊಳ್ಳೆ ಹೆಚ್ಚಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಹೆಚ್. ಪ್ರಸಾದ್ ಮನವಿ ಮಾಡಿದ್ದಾರೆ.

ಮಾಧ್ಯಮ ಪ್ರತಿನಿಧೀಗಳೊಂದಿಗೆ ಆವರು ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೋವಿಡ್ ಕರ್ತವ್ಯದ ನಡುವೆಯೂ ಜನರಿಗೆ ಸಾಂಕ್ರಾಮಿಕ ರೋಗ ಬಾಧಿಸದಂತೆ ನೋಡಿಕೊಳ್ಳುತ್ತಿದೆ. ಜನವರಿಯಿಂದ ನವೆಂಬರ್ ವರೆಗೂ 108 ಡೆಂಗ್ಯೂ ಪ್ರಕರಣಗಳು ದಾಖಲಾಗಿದೆ. ಅದರಲ್ಲಿ ಪಿರಿಯಾಪಟ್ಟಣ ಹಾಗೂ ಮೈಸೂರು ತಾಲೂಕುಗಳಲ್ಲಿ ತಲಾ ಒಂದರAತೆ ಇಬ್ಬರು ಡೆಂಗ್ಯೂ ಸೋಂಕಿತರು ಮೃತಪಟ್ಟಿದ್ದಾರೆ. ಕಳೆದ ಎರಡು ತಿಂಗಳಲ್ಲಿ 28 ಪ್ರಕರಣ ಪತ್ತೆಯಾಗಿದೆ ಎಂದವರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಮಳೆ ಬೀಳುತ್ತಿರುವುದರಿಂದ ನೀರು ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಸೊಳ್ಳೆಗಳ ಹಾವಳಿ ಹೆಚ್ಚಾಗಿ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಜನರು ಸೊಳ್ಳೆಗಳ ಬಾಧೆಗೆ ಒಳಗಾಗದೆ ಕಟ್ಟೆಚ್ಚರ ವಹಿಸುವಂತೆ ಸಲಹೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಇಬ್ಬರನ್ನು ಹೊರತುಪಡಿಸಿದರೆ ಡೆಂಗ್ಯೂಗೆ ತುತ್ತಾಗಿದ್ದ ಉಳಿದ ಎಲ್ಲರೂ ಗುಣ ಮುಖರಾಗಿದ್ದಾರೆ. ಮಳೆಯ ನಂತರ ಸೊಳ್ಳೆಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತರ ಮೂಲಕ ಮನೆ ಮನೆ ಸಮೀಕ್ಷೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಶುಚಿಯಾಗಿಟ್ಟುಕೊಳ್ಳಲು ಜಾಗೃತಿ ಮೂಡಿಸಲಾಗುತ್ತದೆ ಎಂದು ಡಾ.ಕೆ.ಹೆಚ್. ಪ್ರಸಾದ್ ತಿಳಿಸಿದ್ದಾರೆ.