ಮೈಸೂರು: ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯನವರ ಕುರಿತು ಸಂಸದ ಪ್ರತಾಪ್ ಸಿಂಹ ಅವರು ಅವಹೇಳನಕಾರಿ ಶಬ್ದಗಳಿಂದ ನಿಂದಿಸಿರುವುದನ್ನು ಖಂಡಿಸಿ, ಕ್ಷಮೆ ಕೇಳುವಂತೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಮೈಸೂರಲ್ಲಿ ಪ್ರತಿಭಟನೆ ನಡೆಸಿದರು.
ಮೈಸೂರಿನ ಜಲದರ್ಶಿನಿಯಲ್ಲಿರುವ ಸಂಸದ ಪ್ರತಾಪ್ ಸಿಂಹ ಕಛೇರಿ ಎದುರು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ ಸಂಸದ ಪ್ರತಾಪ್ ಸಿಂಹ ಅವರು ಶಾಸಕರಾದ ಪ್ರಿಯಾಂಕ್ ಖರ್ಗೆ ಹಾಗೂ ಸಿದ್ದರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡಿದ್ದೀರಿ, ಅವರ ರಾಜಕೀಯದ ವಯಸ್ಸು ಕೂಡ ನಿಮಗೆ ಆಗಿಲ್ಲ. ಖರ್ಗೆಯವರು ರಾಜೀವ್ ಗಾಂಧಿ ಮತ್ತವರ ಕುಟುಂಬದ ಸದಸ್ಯರ ಹೆಸರನ್ನು ಇಟ್ಟಿದ್ದಾರೆ. ವಾಸ್ತವ ತಿಳಿಯದ, ವಿಷಯಾಧಾರಿತ ಚರ್ಚೆಗೆ ಹೆದರುವ ಸಂಸದರೇ ಈ ವಿಚಾರ ನಿಮಗೆ ಎಷ್ಟು ತಿಳಿದಿದೆ ಎಂದು ಪ್ರಶ್ನಿಸಿದರು.
ಇಂತಹ ದೊಡ್ಡ ನಾಯಕರ ಬಗ್ಗೆ ತಾವು ವೈಯುಕ್ತಿಕವಾಗಿ ನಿಂದಿಸಿ ತೇಜೋವಧೆ ಮಾಡಿರುತ್ತೀರಿ. ನೀವು ಪ್ರಿಯಾಂಕ್ ಖರ್ಗೆಯವರಲ್ಲಿ ಹಾಗೂ ರಾಜ್ಯದ ದಲಿತ ಜನತೆಯಲ್ಲಿ ಕ್ಷಮೆಯಾಚಿಸಬೇಕು. ಇಲ್ಲದಿದ್ದಲ್ಲಿ ಮೈಸೂರಿನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಘೇರಾವ್ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಸಿ. ನರೇಂದ್ರ, ದಸಂಸ ಸಂಚಾಲಕರುಗಳಾದ ಬೊಮ್ಮೇನಹಳ್ಳಿ ಈಶ್ವರ್, ಮುರುಡಗಳ್ಳಿ ಮಹದೇವು, ಯುವಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹಿನಕಲ್ ಮಂಜು, ಮಾಜಿ ಜಿಲ್ಲಾಧ್ಯಕ್ಷ ಹೆಚ್.ಎಸ್. ಕುಮಾರ್, ಬಿಳಿಕೆರೆ ಸ್ವಾಮಿ, ಕೆ.ಎಸ್. ಶಿವರಾಮು, ವಿಜಯ್ ಕುಮಾರ್ ಬಂಡಿಪಾಳ್ಯ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

