ಮೈಸೂರು: ಕಾಂಗ್ರೆಸ್ ಪಕ್ಷದ ಆಯುಸ್ಸು ಇನ್ನು ಕೆಲವೇ ವರ್ಷ ಮಾತ್ರ ಎಂದು ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಹೇಳಿದರು.
ಮೈಸೂರು ಬಿಜೆಪಿ ಕಛೇರಿಯಲ್ಲಿ ಸೋಮವಾರ ಅವರು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ವಾಸ್ತವವಾಗಿ ಕಾಂಗ್ರೆಸ್ ಪಕ್ಷವನ್ನು ದೇಶವು ಸ್ವಾತಂತ್ರ್ಯ ಪಡೆದ ಕೂಡಲೇ ವಿಸರ್ಜಿಸಬೇಕಿತ್ತು. ಇದೇ ಆಶಯವನ್ನು ಮಹಾತ್ಮ ಗಾಂಧೀಜಿ ಅವರೂ ವ್ಯಕ್ತಪಡಿಸಿದ್ದರು. ಆದರೆ, ವಂಶವಾದ, ಜಾತಿವಾದ, ಕೋಮು ವಿಷಬೀಜ ಬಿತ್ತಿದ ಕಾಂಗ್ರೆಸ್ ನ ನೇತಾರರು ಗಾಂಧೀಜಿ ಮಾತನ್ನು ಪುರಸ್ಕರಿಸಲೇ ಇಲ್ಲ. ಇದರಿಂದ ಕಾಂಗ್ರೆಸ್, ಸುಮಾರು ಆರು ದಶಕಗಳ ಕಾಲ ಭ್ರಷ್ಟಾಚಾರಗಳ ಕೂಪವಾಗಿ ದೇಶವನ್ನು ಪರಿವರ್ತಿಸಿತ್ತು ಎಂದು ಮಹೇಶ್ ತಿಳಿಸಿದರು.
ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಗೆ ಮತ್ತು ಕಾಂಗ್ರೆಸ್ ನಾಯಕರಿಗೆ ಸಂವಿಧಾನದ ಬಗ್ಗೆ ಹಾಗೂ ಸಂವಿಧಾನ ಕರ್ತ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ಗೌರವ ಇಲ್ಲ, ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ವೇಳೆ ಸಂವಿಧಾನ ದಿನವನ್ನು ಕಾಂಗ್ರೆಸ್ ಬಹಿಷ್ಕರಿಸಿದೆ. ಇದು ಈ ಪಕ್ಷದ ಗೋಸುಂಬೆ ನೀತಿಗೆ ಸ್ಪಷ್ಟ ಉದಾಹರಣೆ ಅಲ್ಲವೇ ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯ ಕೇಂದ್ರ ಸರಕಾರವು ಮಾಡಿದ ಸಾಧನೆ ಅನನ್ಯ. ಅವರ ನೇತೃತ್ವದಲ್ಲಿ ದೇಶವು ವಿಶ್ವವಂದ್ಯ ರಾಷ್ಟ್ರವಾಗುವತ್ತ ಮುನ್ನಡೆದಿದೆ. ಕಾಂಗ್ರೆಸ್ ತನ್ನ ಅವಧಿಯಲ್ಲಿ ಭ್ರಷ್ಟತೆಯನ್ನೇ ದೊಡ್ಡ ಸಾಧನೆಯನ್ನಾಗಿ ಮಾಡಿಕೊಂಡಿತ್ತು ಎಂದರು.
ಕಾಂಗ್ರೆಸ್ ಪಕ್ಷದವರು ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರನ್ನು ಕೇವಲ ಮತಬ್ಯಾಂಕ್ ಆಗಿ ಪರಿವರ್ತಿಸಿದ್ದರು. ಆದರೆ, ಬಿಜೆಪಿಯು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಚಿಂತನೆಯನ್ನೇ ಅನುಷ್ಠಾನಕ್ಕೆ ತಂದಿದೆ. ಕೇಂದ್ರ ಸಚಿವ ಸಂಪುಟದಲ್ಲಿ ನರೇಂದ್ರ
ಮೋದಿ ಅವರು ದಲಿತರು, ಹಿಂದುಳಿದವರಿಗೆ ಹೆಚ್ಚಿನ ಅವಕಾಶ ನೀಡಿದ್ದಾರೆ. ರಾಜ್ಯಪಾಲರ ನೇಮಕಾತಿಯಲ್ಲೂ ಅವರು ಇದೇ ಮಾದರಿ ಅನುಸರಿಸಿದ್ದಾರೆ. ಕಾಂಗ್ರೆಸ್ ನದು ತೋರಿಕೆಯ ದಲಿತ ಪ್ರೇಮ. ಬಿಜೆಪಿ ದಲಿತರ ಪರ ಇರುವುದರಿಂದ ದಲಿತರು ಬಿಜೆಪಿ ಸೇರುತ್ತಿದ್ದಾರೆ ಎಂದರು.
ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ಹಿಂದೆ ಜನತಾದಳದಲ್ಲಿದ್ದಾಗ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. ಆಗ ತುರ್ತು ಪರಿಸ್ಥಿತಿ ಘೋಷಣೆಯನ್ನು ಸಿದ್ಧರಾಮಯ್ಯವಿರೋಧಿಸಿದ್ದರು. ಈಗ ಅವರು ಇಂದಿರಾ ಗಾಂಧಿ ಅವರ ತುರ್ತು ಪರಿಸ್ಥಿತಿ ಘೋಷಣೆಯನ್ನು ಸಮರ್ಥಿಸುತ್ತಾರಾ ಎಂದು ಪ್ರಶ್ನಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕಾಂಗ್ರೆಸ್ ಪಕ್ಷ ಸೇರಿದವರು. ಅದಕ್ಕೆ ಮುಂಚೆ ಅವರು ಜೆಡಿಎಸ್‌ನಲ್ಲಿ ಇದ್ದರು. ಸಿದ್ದರಾಮಯ ಬದ್ಧತೆ ಇಲ್ಲದ ಒಬ್ಬ ಸಮಯ ಸಾಧಕ ರಾಜಕಾರಣಿ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಎಸ್ ಸಿ ಮೋರ್ಚಾ ಅಧ್ಯಕ್ಷ ಈಶ್ವರ, ಮಾಧ್ಯಮ ವಕ್ತಾರ ಪ್ರದೀಪ್ ಕುಮಾರ್ , ಮಾಧ್ಯಮ ಸಹ ವಕ್ತಾರ ಕೇಬಲ್ ಮಹೇಶ್ ,ಮೈಸೂರು ಜಿಲ್ಲಾ ಗ್ರಾಮಾಂತರ ಎಸ್ ಸಿ ಮೋರ್ಚಾ ಅಧ್ಯಕ್ಷ ಸಿ. ಎಂ. ಮಹದೇವಯ್ಯ, ಎಸ್ ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಪರಮಾನಂದ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಬಾಬು ಉಪಸ್ಥಿತರಿದ್ದರು.

