ಮೈಸೂರು: ಸತತ ಮಳೆ ಸುರಿದ ಪರಿಣಾಮ ನೀರು ಸೋರಿಕೆಯಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಸೆಂಟ್ರಲ್ ಲ್ಯಾಬೋರೇಟರಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಮೈಕ್ರೋಬಯಾಲಜಿ ವಿಭಾಗದ ಪ್ರಯೋಗಾಲವಿರುವ ಕಟ್ಟಡದಲ್ಲಿ ಮಳೆ ನೀರು ಸೋರಿ ಗೋಡೆಗಳೆಲ್ಲಾ ವಸ್ಥಿ ಹಿಡಿದಿದೆ.
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾದ ಹಿನ್ನಲೆಯಲ್ಲಿ ಆರ್ ಟಿಪಿಸಿಆರ್ ಟೆಸ್ಟ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ಡೈರೆಕ್ಟರ್ ಆದ ಡಾ.ಸಿ.ಪಿ. ನಂಜರಾಜ್ ತಿಳಿಸಿದ್ದಾರೆ.
ಆರ್ ಟಿಪಿಸಿಆರ್ ಟೆಸ್ಟ್ ಸ್ಥಗಿತಗೊಳಿಸಿರುವ ಕಾರಣ ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸಂಗ್ರಹಿಸಲಾಗುತ್ತಿರುವ ಸ್ಯಾಂಪಲ್ ಗಳನ್ನು ತಾತ್ಕಾಲಿಕವಾಗಿ ಸಿ.ಎಫ್.ಟಿ.ಆರ್.ಐ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಫಲಿತಾಂಶ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕೆ.ಆರ್.ಆಸ್ಪತ್ರೆಯ ಬಹುತೇಕ ಕಟ್ಟಡಗಳು ಹಳೆಯದಾಗಿರುವುದರಿಂದ ಶಿಥಿಲಾವಸ್ಥೆಯಲ್ಲಿವೆ. ಹಾಗಾಗಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದ ತಾರಸಿಯಿಂದ ನೀರು ಜಿನುಗಿ ಗೋಡೆಗಳು ತೇವವಾಗುತ್ತಿವೆ.
ಇದರಿಂದ ನೆಲದಲ್ಲಿ ನೀರು ನಿಲ್ಲುತ್ತಿರುವುದರಿಂದ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಲು ಕಾರಣವಾಗುತ್ತಿವೆ ಎಂದು ಅವರು ತಿಳಿಸಿದರು.
ಕಟ್ಟಡಗಳ ರಿಪೇರಿ ಕೆಲಸ ಆರಂಭವಾಗಬೇಕು ಮಳೆ ಸಂಪೂರ್ಣವಾಗಿ ನಿಲ್ಲದ ಕಾರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿಲ್ಲ ಎಂದು ಇಂಜಿನಿಯರ್ ಗಳು ಹೇಳುತ್ತಿದ್ದಾರೆ ಎಂದು ಡಾ.ನಟರಾಜ್ ತಿಳಿಸಿದ್ದಾರೆ.
ಮೊದಲು ತುರ್ತಾಗಿ ಲ್ಯಾಬೋರೇಟರಿ ಇರುವ ಮೈಕ್ರೋಬಯಾಲಜಿ ವಿಭಾಗದ ಕಟ್ಟಡದಲ್ಲಿ ನೀರು ಸೋರಿಕೆ ತಡೆಯಲು ಅಗತ್ಯ ಕ್ರಮ ವಹಿಸಲಾಗಿದೆ ಯಾರೂ ಆತಂಕ ಪಡುವುದು ಬೇಡ ಎಂದು ಅವರು ಹೇಳಿದ್ದಾರೆ.

