ವಿವಾದ ಮುಂದುವರಿದರೆ ರಂಗಾಯಣಕ್ಕೆ ಕಪ್ಪು ಚುಕ್ಕಿ-ಎಚ್.ಎಸ್.ಸುರೇಶ್ ಬಾಬು

ಮೈಸೂರು : ರಂಗಾಯಣದಲ್ಲಿ ಉಂಟಾಗಿರುವ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಸೋಮವಾರ ನಡೆದ ಹವ್ಯಾಸಿ ರಂಗಕರ್ಮಿಗಳು ಹಾಗೂ ರಂಗಾಯಣ ನಿರ್ದೇಶಕರ ನೇತೃತ್ವದ ಸಭೆಯಲ್ಲಿ ಮತ್ತೆ ಮಾತಿನ ಚಕಮಕಿ ನಡೆದಿದ್ದು ರಂಗಕರ್ಮಿಗಳ ಅಸಮಾಧಾನಕ್ಕೆ ಎಡೆ ಮಾಡಿದೆ.

ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಕರೆಸುವುದಕ್ಕೆ ಹಿರಿಯ ರಂಗಕರ್ಮಿಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು.ಈ ವಿಚಾರವಾಗಿ ಮಾತುಕತೆ ಮುಂದುವರಿದು, ಪ್ರಗತಿಪರ ಚಿಂತಕರು, ಸಮಾಜವಾದಿಗಳು ಹಾಗೂ ಹಿರಿಯ ರಂಗಕರ್ಮಿಗಳ ನಡುವೆ ವಿವಾದ ಉಂಟಾಗಿತ್ತು.

ಇದಕ್ಕೆ ತೆರೆ ಎಳೆಯುವ ಉದ್ದೇಶದಿಂದ ಸೋಮವಾರ ಮಧ್ಯಾಹ್ನ ರಂಗಾಯಣ ಆವರಣದಲ್ಲೇ ಸಂಧಾನ ಸಭೆ ಏರ್ಪಡಿಸಲಾಗಿತ್ತು.

ಆದರೆ ಸಭೆಯಲ್ಲಿ ಮತ್ತೆ ಮಾತಿನ ಚಕಮಕಿ ನಡೆದಿದ್ದರಿಂದ, ಅಸಮಾಧಾನ ಬುಗಿಲೆದ್ದಿದೆ.

ಈ ಬಗ್ಗೆ ಹವ್ಯಾಸಿ ರಂಗಕರ್ಮಿ ವೇದಿಕೆ ಅಧ್ಯಕ್ಷ ಎಚ್.ಎಸ್.ಸುರೇಶ್ ಬಾಬು ಅವರು ಮಾತನಾಡಿ, ರಂಗಾಯಣ ವಿಚಾರವಾಗಿ ನಡೆಯುತ್ತಿರುವ ವಿವಾದ ಮೈಸೂರು ಮಾತ್ರವಲ್ಲದೆ, ರಂಗಭೂಮಿಯನ್ನೇ ಘಾಸಿಗೊಳಿಸುವಂತೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದು ಹೀಗೆ ಮುಂದುವರಿದರೆ ರಂಗಾಯಣ ಹಾಗೂ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೂ ಕಪ್ಪುಚುಕ್ಕೆ ಯಾಗಲಿದೆ. ನಿರ್ದೇಶಕರೂ ಸಹ ಮಾತಿನ ಭರದಲ್ಲಿ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.