ಮೈಸೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳು ಒಂದೊಂದು ರೀತಿಯಲ್ಲಿ ಅಭಿಮಾನ ತೋರಿಸುತ್ತಿದ್ದಾರೆ.
ವಿಶೇಷವೆಂದರೆ, ಕೆಲವು ಅಭಿಮಾನಿಗಳು ತಮ್ಮ ಮೆಚ್ಚಿನ ನಟ ಅಪ್ಪು ಅವರ ಭಾವ ಚಿತ್ರವನ್ನು ಹಿಡಿದುಕೊಂಡು ಶಬರಿಮಲೆ ಯಾತ್ರೆ ಮಾಡುತ್ತಿದ್ದಾರೆ. ಆ ಮೂಲಕ ಪುನೀತ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅಯ್ಯಪ್ಪ ಸ್ವಾಮಿ ಬಳಿ ಪ್ರಾರ್ಥಿಸಿದ್ದಾರೆ.
ಮೈಸೂರು ಜಿಲ್ಲೆ ಟಿ. ನರಸೀಪುರ ತಾಲ್ಲೂಕಿನ ಕೃಷ್ಣಪುರ ಗ್ರಾಮದ ಅಯ್ಯಪ್ಪ ಸ್ವಾಮಿ ಭಕ್ತರು ಶಬರಿಮಲೆ ಯಾತ್ರೆಗೆ ತೆರಳಿದ್ದು, ಈ ವೇಳೆ ಇರುಮುಡಿಯ ಜತೆ ಪುನೀತ್ ರಾಜ್‍ಕುಮಾರ್ ಅವರ ಭಾವಚಿತ್ರವನ್ನು ಹಿಡಿದು ಸಾಗಿದ್ದಾರೆ.
ಒಟ್ಟು 49 ಮಂದಿ ಅಯ್ಯಪ್ಪ ಭಕ್ತರು ಯಾತ್ರೆಗೆ ತೆರಳಿದ್ದು, ತಾವು ಪ್ರಯಾಣಿಸುವ ಮಿನಿ ಬಸ್ ಗೂ ಅಪ್ಪು ಭಾವ ಚಿತ್ರ ಕಟ್ಟಿರುವುದು ವಿಶೇಷ.
18 ಮೆಟ್ಟಿಲುಗಳನ್ನು ಹತ್ತುವಾಗಲೂ ಇರುಮುಡಿ ಜೊತೆ ಪುನೀತ್ ಭಾವಚಿತ್ರವನ್ನು ಹಿಡಿದುಕೊಂಡಿದ್ದು ಈ ಮೂಲಕ ತಮ್ಮ ಮೆಚ್ಚಿನ ನಟನಿಗೆ ಅಭಿಮಾನ ತೋರಿದ್ದಾರೆ.

