ಜಿಟಿಡಿ, ಸಂದೇಶ್ ನಾಗರಾಜ್ ವಿರುದ್ದ ಗುಡುಗಿದ ಸಾ.ರಾ.ಮಹೇಶ್

ಮೈಸೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಸ್ ಅಭ್ಯರ್ಥಿಗೆ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತಗಳು ಬಂದಿದ್ದು ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಜೆಡಿಎಸ್ ಕಾರ್ಯಕರ್ತರು ಸಾಬೀತು ಮಾಡಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಜಿಲ್ಲಾ ಉಸ್ತುವಾರಿ ಸಚಿವರು ಮೈಸೂರಿನಲ್ಲೇ ಇದ್ದು ಪ್ರಚಾರ ನಡೆಸಿದ್ದರು. ಇದೆಲ್ಲದರ ನಡುವೆಯೂ ನಮ್ಮ ಪಕ್ಷದ ಅಭ್ಯರ್ಥಿ ಕಳೆದ ಬಾರಿಗಿಂತ ಹೆಚ್ಚಿನ ಮತ ಪಡೆದು ಆಯ್ಕೆಯಾಗಿದ್ದಾರೆ. ಜೆಡಿಎಸ್ ಪ್ರಬಲವಾಗಿದೆ ಎಂಬುದನ್ನು ಈ ಚುನಾವಣೆ ಸಾಬೀತು ಪಡಿಸಿದೆ‌ ಎಂದು ಹೇಳಿದರು.

ನಮಗೆ ಜೆಡಿಎಸ್ ಅನಿವಾರ್ಯವೇ ಹೊರತು, ಜೆಡಿಎಸ್ ಗೆ ನಾವು ಅನಿವಾರ್ಯವಲ್ಲ ಎಂಬುದನ್ನು ಈ ಚುನಾವಣೆ ಫಲಿತಾಂಶ ತೋರಿಸಿದೆ. ಈಗಲಾದರೂ ಪಕ್ಷದಲ್ಲಿದ್ದುಕೊಂಡು ವಿರೋಧಿ ಕೆಲಸ ಮಾಡುತ್ತಿರುವವರು ಚಿಂತನೆ ಮಾಡಿ, ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಿ ಎಂದು ಅವರು ಸಲಹೆ ನೀಡಿದರು.

ಪಕ್ಷ ವಿರೋಧಿ ಕೆಲಸ ಮಾಡುತ್ತಿರುವ ನಾಯಕರುಗಳು ಎಷ್ಟೇ ನೋವು ಕೊಟ್ಟರೂ ಅದನ್ನು ಕಾರ್ಯಕರ್ತರು ಸಹಿಸಿಕೊಂಡಿದ್ದಾರೆ. ನಾವು ನಿಮ್ಮನ್ನು ನಾಯಕರೆಂದು ಒಪ್ಪಿಕೊಂಡಿದ್ದೇವೆ. ನೀವು ಇತರರಿಗೆ ಮಾರ್ಗದರ್ಶನ ನೀಡಿ. ನೀವು ನಮ್ಮ ಪಕ್ಷದ ಚಿಹ್ನೆ, ಕಾರ್ಯಕರ್ತರ ಶ್ರಮದಿಂದ ಗೆದ್ದಿದ್ದೀರಿ. ಹಾಗಾಗಿ ನೀವು ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಿ.ನಿಮ್ಮ ಮನಸ್ಸು ಈಗಲಾದರೂ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಪರೋಕ್ಷವಾಗಿ ಶಾಸಕ ಜಿ ಟಿ ದೇವೆಗೌಡರಿಗೆ ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಸಾ.ರಾ.ಮಹೇಶ್, 12 ವರ್ಷ ಎಂಎಲ್‌ ಸಿಯಾಗಿ, ಅವರ ಕುಟುಂಬದವರು ಮೇಯರ್ ಆಗಿ ಕೆಲಸ ಮಾಡಿದ್ದಾರೆ. ನಮ್ಮ ಪಕ್ಷಕ್ಕಾಗಿ ಅವರೂ ಕೆಲಸ ಮಾಡಿದ್ದರು.  ಪಕ್ಷ ಅವರ ದುಡಿಮೆಗಿಂತ ಹೆಚ್ಚು ಅವಕಾಶ ನೀಡಿದೆ.  ಹೀಗಿದ್ದೂ ನಮ್ಮ ವಿರುದ್ಧ ಯಾಕೆ ಮಾತನಾಡುತ್ತಾರೋ ಗೊತ್ತಿಲ್ಲ ಎಂದರು.

ಸಂದೇಶ್ ನಾಗರಾಜ್ ಕುಟುಂಬಕ್ಕೆ ಜೆಡಿಎಸ್ ಯಾವುದೇ ಮೋಸ ಮಾಡಿಲ್ಲ. ಅವರು ಯಾಕೆ ನಮ್ಮ‌ ಪಕ್ಷದ ನಾಯಕರನ್ನು ದೂರುತ್ತಿದ್ದಾರೋ ಗೊತ್ತಿಲ್ಲ. ಸಂದೇಶ್ ನಾಗರಾಜ್ ಜನವರಿ 5ಕ್ಕೆ ಸುದ್ದಿಗೋಷ್ಠಿ ನಡೆಸಲಿ. ಸುದ್ದಿಗೋಷ್ಠಿಯಲ್ಲಿ ಮಾಡುವ ಆರೋಪಕ್ಕೆ ಆವತ್ತೇ ಉತ್ತರ ಕೊಡುತ್ತೇವೆ ಎಂದು ಹೇಳಿದರು.

ನಾಮನಿರ್ದೇಶಿತ ಸದಸ್ಯರಿಗೆ ಮತ ಹಾಕುವ ಹಕ್ಕು ನೀಡಿದ್ದು ನಮ್ಮ ಪ್ರಯಾಸಕ್ಕೆ ಕಾರಣವಾಯ್ತು ಎಂದು ವಿಶ್ಲೇಷಿಸಿದ ಅವರು  ಕಳೆದ ಬಾರಿ ತಾಲೂಕು ಪಂಚಾಯಿತಿಯ 150, ಜಿಲ್ಲಾ ಪಂಚಾಯಿತಿಯ 21 ಸದಸ್ಯರಿದ್ದರು.  ಈಗ ತಾ‌ಪಂ, ಜಿಪಂ ಸದಸ್ಯರಿಲ್ಲ. ಬಿಜೆಪಿ ಸರ್ಕಾರ ನಾಮನಿರ್ದೇಶಿತ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಿದ್ದೂ ನಮಗೂ ಬಿಜೆಪಿಗೂ 139 ಮತಗಳ ಅಂತರ ಇತ್ತು.  ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಗಳಿಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ನಿಂದ ಗೆಲುವು ಸಾಧಿಸಿದ ಸಿ.ಎನ್.ಮಂಜೇಗೌಡ, ನಾಯಕರುಗಳಾದ ಬೀರಿಹುಂಡಿ ಬಸವಣ್ಣ, ಲಿಂಗಪ್ಪ ಮತ್ತಿತರರಿದ್ದರು.