ಬೆಂಗಳೂರು: ಕಾಂಗ್ರೆಸ್ ನ ಕೆಲವು ಶಾಸಕರೇ ನಾವು ತಂದ ಮತಾಂತರ ನಿಷೇಧ ಕಾಯ್ದೆಯ ಪರವಾಗಿ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಕಟೀಲ್ ಅವರು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಅವರೇ ಮತಾಂತರ ನಿಷೇಧ ಕಾಯ್ದೆಗೆ ಸಹಿ ಹಾಕಿದ್ದಾರೆ. ಕಾಂಗ್ರೆಸ್ ನ ಕೆಲವು ಶಾಸಕರೇ ನಾವು ತಂದ ಕಾಯ್ದೆ ಪರವಾಗಿ ಇದ್ದಾರೆ ಎಂದು ಅವರು ತಿಳಿಸಿದರು.
ಮತಾಂತರದಿಂದ ಸಮಾಜದಲ್ಲಿ ಕಲಹ ಉಂಟಾಗುತ್ತಿತ್ತು. ಅದಕ್ಕೆ ತಡೆಗೋಡೆ ನಿರ್ಮಿಸಲು ಕಾಯ್ದೆ ಜಾರಿ ಮಾಡಲಾಗಿದೆ. ಬೊಮ್ಮಾಯಿಯವರು ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡಿದ್ದಾರೆಂದು ಅವರು ತಿಳಿಸಿದರು.
ಕಾಂಗ್ರೆಸ್ ಅಧಿಕಾರ ಇದ್ದಾಗ ಒಂದು ಮಾತು ಇಲ್ಲದಾಗ ಒಂದು ಮಾತು ಆಡುತ್ತದೆ. ಕಾಂಗ್ರೆಸ್ ನವರು ಯಾವಾಗ ಆಡಳಿತದಲ್ಲಿ ಇಲ್ಲವೋ ಆಗೆಲ್ಲ ನಮ್ಮ ಸರ್ಕಾರವನ್ನು ವಿರೋಧಿಸಿಕೊಂಡೇ ಬಂದಿದ್ದಾರೆಂದರು.
ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಇನ್ನೂ ಒಂದು ವರ್ಷವಾಗಿಲ್ಲ. ಇಷ್ಟು ಬೇಗ ಅಧಿಕಾರದಿಂದ ಕೆಳಗೆ ಇಳಿಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲ್, 2023ರ ಚುನಾವಣೆಯವರೆಗೂ ಬೊಮ್ಮಾಯಿಯವರೇ ಸಿಎಂ ಆಗಿರುತ್ತಾರೆ. ಮುಂದಿನ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವವಿರುತ್ತದೆ ಎಂದು ಹೇಳಿದರು.
ಸರ್ಕಾರದಲ್ಲಿ ಅರಾಜಕತೆ ಹುಟ್ಟಿಹಾಕಲು ಸಿಎಂ ಬದಲಾವಣೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಕಾಂಗ್ರೆಸ್ ನವರೇ ಇಂತಹ ಸುದ್ದಿಗಳನ್ನು ಹುಟ್ಟಿಸಿರಬಹುದು ಎಂದು ಕಟೀಲ್ ಆರೋಪಿಸಿದರು.
ಸಿಎಂ ಬೊಮ್ಮಾಯಿಗೆ ಆರೋಗ್ಯ ಸರಿಯಿಲ್ಲ, ಕಾಲು ನೋವಿದೆ. ಅದಕ್ಕೆ ಸಿಎಂ ಬೊಮ್ಮಾಯಿಯವರು ಚಿಕಿತ್ಸೆ ಪಡೆಯುತ್ತಿದ್ದಾರೆ, ಆದರೆ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವುದಿಲ್ಲ ಎಂದು ಕಟೀಲ್ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಟೀಲ್, ಸಚಿವ ಸಂಪುಟ ಪುನಾರಚನೆ ಅದು ಸಿಎಂ ಅವರಿಗೆ ಬಿಟ್ಟಿದ್ದು, ಒಂದು ವೇಳೆ ಮತ್ತೆ ರಚನೆ ಮಾಡಿದರೆ ನಮ್ಮ ಜೊತೆ ಚರ್ಚೆ ಮಾಡುತ್ತಾರೆಂದರು.

