ಮೈಮುಲ್ ಗೆ ಆಡಳಿತಾಧಿಕಾರಿ ನೇಮಕ ಪ್ರಯತ್ನಕ್ಕೆ ಹೈಕೋರ್ಟ್ ತಡೆಯಾಜ್ಞೆ

ಮೈಸೂರು: ಐದು ವರ್ಷಗಳ ಅವಧಿ ಮುಗಿದ ಮೈಸೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮೈಮುಲ್ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಸಕಾಲಕ್ಕೆ ಚುನಾವಣೆ ನಡೆಸದೆ ಆಡಳಿತಾಧಿಕಾರಿ ನೇಮಕ ಮಾಡುವ ಪ್ರಯತ್ನಕ್ಕೆ ಹೈಕೋರ್ಟ್ ತಡೆ ನೀಡಿದೆ.

ಇದರಿಂದ ಚುನಾವಣೆ ನಡೆಯುವ ತನಕ ಹಾಲಿ ಆಡಳಿತ ಮಂಡಳಿಯೇ ಅಧಿಕಾರದಲ್ಲಿ ಮುಂದು ವರಿಯಲು ಅವಕಾಶವಾಗಿದೆ.

ಕಡಿಮೆ ಅವಧಿಗೆ ಅಧ್ಯಕ್ಷರಾಗಿ ನಿರ್ಗಮಿಸ ಬೇಕಿದ್ದ ಕೆ. ಈರೇಗೌಡ ಸೇರಿದಂತೆ ಹಾಲಿ ನಿರ್ದೇಶಕರಿಗೆ ಹೈಕೋರ್ಟ್ ಆದೇಶದಿಂದಾಗಿ ಮತ್ತಷ್ಟು ದಿನ ಅಧಿಕಾರ ಅನುಭವುಸುವ ಅವಕಾಶ ಸಿಕ್ಕಿದೆ.

ನ್ಯಾಯಾಲಯದ ತಡೆಯಾಜ್ಞೆ ಯಿಂದ ಆಡಳಿತಾಧಿಕಾರಿ ಮೂಲಕ ಆಡಳಿತ ನಡೆಸಲು ಬಯಸಿದ್ದ ರಾಜ್ಯಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ.

2021ರ ಮಾರ್ಚ್ ಎರಡರಂದು ನಡೆದಿದ್ದ ಮೈಮುಲ್ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಸಚಿವ ಜಿ. ಟಿ. ದೇವೇ ಗೌಡರ ಬಣದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ನಂತರ,ಮಾ.16ರಂದು ನಡೆದಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಮಾಜಿ ಶಾಸಕ ಕೆ. ಮಹದೇವು ಪುತ್ರ ಪಿ. ಎಂ. ಪ್ರಸನ್ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

ಆದರೆ, ಬದಲಾದ ರಾಜಕೀಯ ಬೆಳವಣಿಗೆಯಲ್ಲಿ 2024ರ ಆಗಸ್ಟ್ ತಿಂಗಳಲ್ಲಿ ತಮ್ಮಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಾಗಿ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ, ಸಮಾಜ ಕಲ್ಯಾಣ ಸಚಿವ ಡಾ. ಎಚ್. ಸಿ. ಮಹದೇವಪ್ಪ ಅವರ ಅಸಪ್ತ ಆರ್. ಚೆಲುವರಾಜು ಅಧ್ಯಕ್ಷರಾಗಿದ್ದರು.

ಈ ವೇಳೆ ಅಧ್ಯಕ್ಷ ಸ್ಥಾನಕ್ಕೆ ಎಚ್. ಡಿ. ಕೋಟೆ ತಾಲ್ಲೂಕಿನ ಕೆ. ಈರೇಗೌಡರು ತೀವ್ರ ಪೈಪೋಟಿ ನೀಡಿದ್ದರಿಂದಾಗಿ ಆರ್. ಚೆಲುವರಾಜು ಹಾಗೂ ಕೆ. ಈರೇಗೌಡರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿತ್ತು.

ಹಾಗಾಗಿ, ಸಕಾಲಕ್ಕೆ ರಾಜೀನಾಮೆ ಕೊಡಲು ಬಯಸದ ಆರ್. ಚೆಲುವರಾಜು ಅವರ ಮೇಲೆ ಶಾಸಕರು, ಮುಖಂಡರು ಒತ್ತಡ ಹೇರಿದ್ದರಿಂದಾಗಿ 2025ರ ಸೆಪ್ಟೆಂಬರ್ ತಿಂಗಳ 9ರಂದು ಅವರು ರಾಜೀ ನಾಮೆ ಕೊಟ್ಟಿದ್ದರು. ನಂತರ, ತೆರವಾದ ಅಧ್ಯಕ್ಷ ಸ್ಥಾನಕ್ಕೆ ಅ. 23ರಂದು ನಡೆದ ಚುನಾವಣೆಯಲ್ಲಿ ಕೆ. ಈರೇಗೌಡರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಎರಡು ದಶಕಗಳಿಂದ ಕಾದಿದ್ದ ಅಧ್ಯಕ್ಷಗಾದಿಯ ಕನಸನ್ನು ನನಸಾಗಿಸಿಕೊಂಡಿದ್ದರು.

ಮಾರ್ಚ್15ರಂದು ಆಡಳಿತ ಮಂಡಳಿಯ ಐದು ವರ್ಷಗಳ ಅವಧಿ ಮುಗಿದಿರುವ ಪರಿಣಾಮ ಐದು ತಿಂಗಳು ಕಳೆದಿದ್ದ ಕೆ. ಈರೇಗೌಡರು ಮಾಜಿಯಾಗಬೇಕಿತ್ತು. ಆದರೆ, ರಾಜ್ಯ ಸರ್ಕಾರ ಸಕಾಲದಲ್ಲಿ ಚುನಾವಣೆ ನಡೆಸದ ಕಾರಣ ಆಡಳಿತ ಮಂಡಳಿ ಯನ್ನು ಮುಂದುವರಿಸಬೇಕೆಂದು ಅಧ್ಯಕ್ಷ ಕೆ. ಈರೇಗೌಡ ಅವರು ಹೈಕೋರ್ಟ್ ಮೊರೆ ಹೋದರು.

ಹೈಕೋರ್ಟ್ ಆಡಳಿತಾಧಿಕಾರಿಗಳ ನೇಮಕಕ್ಕೆ ತಡೆಯಾಜ್ಞೆ ನೀಡಿ, ಹಾಲಿ ಮಂಡಳಿ ಯನ್ನೇ ಮುಂದುವರಿಸಲು ಆದೇಶ ಹೊರಡಿಸಿ ರುವ ಪರಿಣಾಮ ಎಲ್ಲರ ಲೆಕ್ಕಚಾರ ತಲೆ ಕೆಳಗಾಗಿದೆ.

ಹೈಕೋರ್ಟ್ ಚುನಾವಣೆ ನಡೆಸುವ ತನಕವು ಹಾಲಿ ಆಡಳಿತ ಮಂಡಳಿ ನಿರ್ದೇಶಕರನ್ನೇ ಮುಂದುವರಿಸುವಂತೆ ಸೂಚಿಸಿದ್ದು ಈರೇಗೌಡ ಸೇರಿದಂತೆ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿದೆ.