ಮೈಸೂರು: ಪುತ್ರ ಶೋಕದ ನಡುವೆಯೂ ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ದುಃಖ ತಪ್ತ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 19 ವರ್ಷದ ಮಂಡ್ಯ ಜಿಲ್ಲೆ ಮಳವಳ್ಳಿ ನಿವಾಸಿ ಶರತ್ ಅವರ ಮೆದುಳು ನಿಷ್ಕ್ರೀಯಗೊಂಡಿತ್ತು.
ಹಾಗಾಗಿ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪುತ್ರನ ನಿಧನದ ನೋವಿನಲ್ಲೂ ಶರತ್ ತಂದೆ,ತಾಯಿ ಮಾದರಿಯಾಗಿದ್ದಾರೆ.
ಡಿಸೆಂಬರ್ 24ರಂದು ಶರತ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.
ತಕ್ಷಣ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿನ ವೈದ್ಯರ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಸ್ಪಂದನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸೆಂಬರ್ 24 ರಂದು ಮಧ್ಯರಾತ್ರಿ 1.10 ರ ಸುಮಾರಿಗೆ ಶರತ್ ಅವರನ್ನು ಮೈಸೂರಿನ ಅಪೊಲೊ ಬಿ.ಜಿ. ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಅಲ್ಲಿ ಸಿಟಿ ಸ್ಕ್ಯಾನಿಂಗ್ ಮಾಡಿದಾಗ ಮೆದುಳಿನ ಕಾಂಡದ ಇನ್ಫಾರ್ಕ್ಟ್ ಗೋಚರಿಸಿತು. ಎರಡು ದಿನಗಳ ಕಾಲ ಲೈಫ್ ಸಪೋರ್ಟ್ ನಲ್ಲಿ ಇರಿಸಲಾಗಿತ್ತು. ಡಿಸೆಂಬರ್ 26 ರಂದು ಶರತ್ ಅವರ ಮಿದುಳು ಹೊರತಪಡಿಸಿ ಉಳಿದ ಅಂಗಾಂಗಗಳು ಆರೋಗ್ಯವಾಗಿದ್ದವು.
ಈ ವಿಚಾರವನ್ನು ಶರತ್ ಅವರ ಮನೆಯವರಿಗೆ ತಿಳಿಸಿ, ಅವರ ಅಂಗಾಂಗದಿಂದ 6 ಜನರ ಬಾಳಿಗೆ ಬೆಳಗಬಹುದು ಎಂಬುದನ್ನು ವಿವರಿಸಲಾಯಿತು.
ಮಗನ ಪರಿಸ್ಥಿತಿಕಂಡು ಚಿಂತಕ್ರಾಂತರಾಗಿದ್ದ ತಂದೆ ತಾಯಿ ಆ ದುಖಃದಲ್ಲೂ ಮಗನ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿ ಆ ಮೂಲಕ ಮಗನ ಸಾವು ವ್ಯರ್ಥವಾಗದಂತೆ ನೋಡಿಕೊಂಡರು.
ಶರತ್ ಅವರ ಹೃದಯ, 2 ಕಿಡ್ನಿಗಳು, 1 ಯಕೃತ್ತು, 1 ಮೇದೋಜೀರಕ ಗ್ರಂಥಿ, ಕಾರ್ನಿಯಾವನ್ನು ದಾನವಾಗಿ ಪಡೆಯಲಾಯಿತು.
ಈ ಎಲ್ಲಾ ಅಂಗಾಂಗಗಳನ್ನು ನಿಯಮಗಳ ಪ್ರಕಾರ ದಾಖಲಿಸಿಕೊಂಡು ಕಾಯುತ್ತಿದ್ದವರಿಗೆ ಅಳವಡಿಸಲು ಕಳುಹಿಸಿಕೊಡಲಾಯಿತು.
ಶರತ್ ಅಪಘಾತದಲ್ಲಿ ಚಿಕ್ಕ ವಯಸ್ಸಿನಲ್ಲಿ ಮೃತಪಟ್ಟರೂ ಹಲವರ ಪ್ರಾಣ ಉಳಿಸಿದ್ದಾರೆ.

