ಮೈಸೂರು: ಕುಡಿದ ಮತ್ತಿನಲ್ಲಿದ್ದ ಆ್ಯಂಬುಲೆನ್ಸ್ ಚಾಲಕ ವಾಹನ ನಿಲ್ಲಿಸಿದ್ದರಿಂದ ತಡವಾದ ಕಾರಣ ರೋಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಹಾಸನ ಜಿಲ್ಲೆ ಸಿದ್ದಾಪುರ ಗ್ರಾಮದ ತೀರ್ಥಾನಂದ (30) ಮೃತಪಟ್ಟ ದಿರ್ದೈವಿ.
ಡಿಸೆಂಬರ್ 25ರ ರಾತ್ರಿ ಆ್ಯಂಬುಲೆನ್ಸ್ ಮಡಿಕೇರಿಯಿಂದ ಬೆಂಗಳೂರಿಗೆ ಹೊರಟಿತ್ತು.
ಆದರೆ ಚಾಲಕ ಮೈಸೂರಿನ ಹುಣಸೂರು ನಗರದಲ್ಲಿ ಆ್ಯಂಬುಲೆನ್ಸ್ ನಿಲ್ಲಿಸಿ ಬಿಟ್ಟಿದ್ದ.
ತೀರ್ಥಾನಂದ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಪೋಷಕರು ಆತನನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.
ಅಲ್ಲಿನ ವೈದ್ಯರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.
ಹಾಗಾಗಿ ಆ್ಯಂಬುಲೆನ್ಸ್ ಮೂಲಕ ಅವರನ್ನು ಬೆಂಗಳೂರಿನತ್ತ ಕರೆದೊಯ್ಯಲಾಗಿತ್ತು.
ಆದರೆ ಚಾಲಕ ಮಧ್ಯೆ ಮಧ್ಯೆ ಆ್ಯಂಬುಲೆನ್ಸ್ ನಿಲ್ಲಿಸುತ್ತಿದ್ದ. ಹುಣಸೂರು ಬಳಿ ವಾಹನ ನಿಲ್ಲಿಸಿ ಇನ್ನು ಮುಂದಕ್ಕೆ ಹೋಗಲು ಸಾಧ್ಯವೇ ಇಲ್ಲ ಎಂದು ಹೇಳಿಬಿಟ್ಟಿದ್ದ.
ನಂತರ ಸ್ಥಳೀಯರು ರೋಗಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಟ್ಟಿದ್ದರು.
ರೋಗಿಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತೀರ್ಥಾನಂದ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಈ ಪ್ರಕರಣ ಸಂಬಂಧ ಆ್ಯಂಬುಲೆನ್ಸ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಕುಡಿತದ ಚಟವಿರುವ ಚಾಲಕನಿಗೆ ಆ್ಯಂಬುಲೆನ್ಸ್ ಓಡಿಸಲು ಅವಕಾಶ ಕೊಟ್ಟಿದ್ದು ತಪ್ಪು,ಅನ್ಯಾಯ ವಾಗಿ ಒಬ್ಬರ ಜೀವ ಹೋದಂತಾಯಿತು ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

