ಹುಬ್ಬಳ್ಳಿ: ಎಂಇಎಸ್ ಪುಂಡಾಟಿಕೆ ವಿರೋಧಿಸಿ ಡಿಸೆಂಬರ್ 31ರಂದು ನೀಡಿರುವ ಬಂದ್ ಕೈ ಬಿಡುವಂತೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಕನ್ನಡ ಪರ ಸಂಘಟನೆಗಳಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕಾರಣಿ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಕನ್ನಡ ಪರ ಸಂಘಟನೆಗಳ ಆಶಯದಂತೆ ಕಟ್ಟುನಿಟ್ಟಿನ ಹಾಗೂ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡುವುದು ಎಲ್ಲದಕ್ಕೂ ಉತ್ತರವಲ್ಲ, ಪರಿಹಾರವೂ ಅಲ್ಲ. ಹಾಗಾಗಿ ರಾಜ್ಯ ಬಂದ್ ಕರೆ ನೀಡುವುದು ಬೇಡ ಎಂದು ಮನವಿ ಮಾಡಿದ್ದಾರೆ.
ಎಂಇಎಸ್ ಬ್ಯಾನ್ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಅಲ್ಲದೇ ಇದರ ಬಗ್ಗೆ ಅಧಿವೇಶನದಲ್ಲಿಯೂ ಕೂಡ ಚರ್ಚೆ ಮಾಡಿದ್ದೇನೆ. ಕೂಡಲೇ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಜನರು ಈಗಿನ್ನೂ ಕೋವಿಡ್ ನಿಂದ ಹೊರ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬಂದ್ ಕರೆ ನೀಡುವುದು ಸಮಂಜಸವಲ್ಲ ಎಂದು ಬೊಮ್ಮಾಯಿ ಹೇಳಿದರು.

