ಬೆಂಗಳೂರು: ಎಲ್ಲಾ ಜಿಲ್ಲಾಧಿಕಾರಿಗಳು ಯಜಮಾನಿಕೆ ಸಂಸ್ಕೃತಿ ಬಿಟ್ಟು ಜನರ ಸೇವಕರು ಎಂಬುದನ್ನು ಮರೆಯಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಡಿಸಿಗಳಿಗರ ಛಾಟಿ ಬೀಸಿದ್ದಾರೆ.
ಗುರುವಾರವಷ್ಟೇ ಸಿಇಒಗಳಿಗೆ ನೀತಿ ಪಾಠ ಮಾಡಿದ್ದ ಬೊಮ್ಮಾಯಿ ಅವರು ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೆಲವರ ಕಾರ್ಯವೈಖರಿಗೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳು ಮನೋಭಾವನೆಯನ್ನು ಬದಲಾಯಿಸಿಕೊಳ್ಳಿ ಎಂದು ಆರಂಭಿಸಿ ಯಜಮಾನಿಕೆ ಸಂಸ್ಕೃತಿ ಬಿಡಬೇಕು. ಜನರ ಕಷ್ಟ ಕಾರ್ಪಣ್ಯಗಳಿಗೆ ನೀವು ಸ್ಪಂದಿಸಬೇಕೆಂದು ಆದೇಶಿಸಿದರು.
ಕೆಳಹಂತದ ಅಧಿಕಾರಿಗಳು ತಪ್ಪು ಮಾಡಿದರೆ ನೀವೇ ಹೊಣೆಗಾರರು ಎಂದು ಎಚ್ಚರಿಸಿದರು.
ಅವರು ಕಳುಹಿಸಿದ ಕಡತಗಳನ್ನು ಪರಿಶೀಲಿಸಿ ಏಕಾಏಕಿ ಸಹಿ ಹಾಕುವ ಪ್ರವೃತ್ತಿಯನ್ನು ನಿಲ್ಲಿಸಿ ಎಂದು ಸೂಚಿಸಿದರು.
ಕೆಳಹಂತದ ಅಧಿಕಾರಿಗಳನ್ನು ನಂಬಿ ಪ್ರಮಾದ ಮಾಡಿಕೊಳ್ಳಬೇಡಿ ಎಂದು ಸಲಹೆ ಮಾಡಿದರು.
ಜಿಲ್ಲಾಧಿಕಾರಿಗಳು ಕೇವಲ ಕಚೇರಿಗಳಿಗೆ ಸೀಮಿತವಾಗಬಾರದು. ಹೊರಗಿನ ಸಮಸ್ಯೆ ಕಡೆಗೂ ನೀವು ಗಮನಹರಿಸಬೇಕು.
ಜಿಲ್ಲೆಗಳಲ್ಲಿ ಜನರ ಸೇವೆ ಮಾಡುವ ಭಾಗ್ಯ ಒಮ್ಮೆ ಮಾತ್ರ ಸಿಗುತ್ತದೆ. ಸಿಕ್ಕ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಸಿಎಂ ಕಿವಿಮಾತು ಹೇಳಿದರು.
ಗ್ರಾಮಗಳಿಗೆ ಹೋಗಿ ಗ್ರಾಮವಾಸ್ತವ್ಯ ಮಾಡಿ ಎಂದು ನಿರ್ದೇಶಿಸಿದರು.
ಅಧಿಕಾರ ಇರುವುದು ಜನರ ಸೇವೆ ಮಾಡುವುದಕ್ಕೆ ಎಂಬುದನ್ನು ಯಾರೂ ಮರೆಯಬಾರದು. ಅಧಿಕಾರ ದುರುಪಯೋಗವಾದಂತೆ ಕೆಲಸ ಮಾಡಬೇಕು ಎಂದು ಆದೇಶಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ ವಿವಿಧ ಕಡೆ ಭಾರೀ ಮಳೆಯಿಂದಾಗಿ ಅತಿವೃಷ್ಟಿ ಉಂಟಾಗಿದೆ. ಅನೇಕ ಕಡೆ ಮನೆ, ಜನ, ಜಾನುವಾರು ಕೊಚ್ಚಿ ಹೋಗಿವೆ. ಎಷ್ಟು ಜನರು ಸ್ಥಳಗಳಿಗೆ ಹೋಗಿ ಸಮೀಕ್ಷೆ ನಡೆಸಿದ್ದೀರಿ ಎಂದು ಪ್ರಶ್ನಿಸಿದರು.
ಪರಿಹಾರ ಆಪ್ ಮೂಲಕ ನಾವು ರೈತರಿಗೆ ಪರಿಹಾರ ನೀಡುತ್ತಿದ್ದೇವೆ. ತಕ್ಷಣವೇ ಎಲ್ಲ ಜಿಲ್ಲಾಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಯಾರು ಪರಿಹಾರ ಪಡೆಯಲು ಅರ್ಹರಿದ್ದಾರೋ ಅಂಥವರಿಗೆ ತಕ್ಷಣವೇ ಪರಿಹಾರ ಕೊಡಬೇಕೆಂದು ಬೊಮ್ಮಾಯಿ ಸೂಚಿಸಿದರು.

