ದೇಶದಲ್ಲಿ ಏರುತ್ತಿರುವ ಓಮಿಕ್ರಾನ್ ಕಠಿಣ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರಗಳು

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ರೂಪಾಂತರಿ ಮತ್ತು ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಲಾಕ್‍ಡೌನ್ ವಿಧಿಸುವ ಲಕ್ಷಣಗಳು ಗೋಚರಿಸಿವೆ.

ಏಳು ತಿಂಗಳ ಬಳಿಕ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 2000ರ ಗಡಿ ದಾಟಿರುವುದರಿಂದ  ದೆಹಲಿ ಸಿಎಂ  ಕಠಿಣ ಕ್ರಮಗಳನ್ನು ಘೋಷಿಸಲಿದ್ದಾರೆ.

ಹೊಸ ಓಮಿಕ್ರಾನ್ ರೂಪಾಂತರಿ ಕೊರೊನಾ ವೈರಸ್ ಮೂರನೇ ಅಲೆಯ ಭೀತಿ ಸೃಷ್ಟಿಸಿರುವಂತೆಯೇ ಕೋವಿಡ್-19ರ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ ಕಳೆದ ಏಳು ದಿನಗಳಲ್ಲಿ 7,865 ದಾಟಿದೆ.

ಪಶ್ಚಿಮ ಬಂಗಾಳದಲ್ಲೂ ಕೋವಿಡ್ ಶೇ.12 ಹೆಚ್ಚಳ: ಕೋವಿಡ್ ಪಾಸಿಟಿವಿಟಿ ದರವು ಶನಿವಾರ ಶೇ.12.02ರಷ್ಟು ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಹಲವಾರು ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಮಮತಾ ಬ್ಯಾನರ್ಜಿ ಸರ್ಕಾರದ ಪ್ರಮುಖ ಯೋಜನೆಯ ಎರಡು ಕಾರ್ಯಕ್ರಮಗಳನ್ನು ರದ್ದುಪಡಿಸಿದೆ.

ಸೋಮವಾರದಿಂದ ವಚ್ರ್ಯುವಲ್ ವಿಧಾನದಲ್ಲಿ ಕಲಾಪಗಳನ್ನು ನಡೆಸಲು ಕೋಲ್ಕತ್ತಾ ಹೈಕೋರ್ಟ್ ನಿರ್ಧರಿಸಿದೆ.

ಹಲವು ರೈಲುಗಳ ಸಂಚಾರ ರದ್ದು: ಭಾರತೀಯ ರೈಲ್ವೆ ಮುಂಬೈನಿಂದ ಹೊರಡುವ 14 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ ಮತ್ತು ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಲೇ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.