ಓಮಿಕ್ರಾನ್ ತಡೆಗೆ ಕಠಿಣ ಕ್ರಮ ಅನಿವಾರ್ಯ; ತಜ್ಞರ ಜೊತೆ ಚರ್ಚಿಸಿ ತೀರ್ಮಾನ-ಸಿಎಂ

ಬೆಂಗಳೂರು:ಅಕ್ಕಪಕ್ಕದ ರಾಜ್ಯಗಳಲ್ಲಿ ಹಾಗೂ ನಮ್ಮ ರಾಜ್ಯದಲ್ಲಿ ಕೋವಿಡ್ ಮತ್ತು ಓಮಿಕ್ರಾನ್ ಸೋಂಕು ಹೆಚ್ಚಾಗುತ್ತಿರುವುದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಮಂಗಳವಾರ ತಜ್ಞರ ಜೊತೆ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸುತ್ತೇವೆ  ಎಂದು ಹೇಳಿದರು.

ವೇಗವಾಗಿ ಹರಡುತ್ತಿರುವ ಸೋಂಕು ನಿಯಂತ್ರಣಕ್ಕೆ ಮುಂದಿನ ದಿನಗಳಲ್ಲಿ ಯಾವ ರೀತಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ಬಗ್ಗೆ ತಜ್ಞರ ಜೊತೆ ಚರ್ಚೆ ನಡೆಸುವ ಅಗತ್ಯವಿದೆ. ಹೀಗಾಗಿ ಮಂಗಳವಾರ ಸಂಜೆ ತಜ್ಞರ ಜೊತೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ತಜ್ಞರ ಜೊತೆ ಮಾತುಕತೆ ನಡಸಿ ಅವರು ನೀಡಿದ ಸಲಹೆಗಳ ಆಧಾರದ ಮೇಲೆ ಗುರುವಾರ ಸಂಪುಟ ಸಹೋದ್ಯೋಗಿಗಳ ಜೊತೆ ಸಚಿವ ಸಂಪುಟ ಸಭೆ ನಡೆಸಿ ಚರ್ಚಿಸುತ್ತೇನೆ ಎಂದು ಸಿಎಂ ತಿಳಿಸಿದರು.

ಸಭೆಯಲ್ಲಿ ರಾಜ್ಯದ ಒಟ್ಟಾರೆ ಸ್ಥಿತಿಗತಿ, ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಈ ಹಿಂದೆ ಕೋವಿಡ್ ಮೊದಲ ಮತ್ತು ಎರಡನೇ ಅಲೆ ಬಂದು ಲಾಕ್ ಡೌನ್ ಮಾಡಿ ಆದ ಅನುಭವಗಳು ಬಗ್ಗೆ ಎಲ್ಲರಿಗು ಅರಿವಿದೆ.ಈ ಸಂದರ್ಭದಲ್ಲಿ ಜನರು ಸ್ವಯಂ ನಿರ್ಬಂಧ ಹಾಕಿಕೊಳ್ಳಲೇಬೇಕು ಇಲ್ಲವಾದರೆ ಬಹಳ ಕಷ್ಟ ಎಂದು ಹೇಳಿದರು.

ಈ ಮೂಲಕ ಮುಂದಿನ ದಿನಗಳಲ್ಲಿ ಓಮಿಕ್ರಾನ್ ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮ ಜಾರಿಗೆ ತರುವ ಬಗ್ಗೆ ಮುಖ್ಯಮಂತ್ರಿಗಳು ಸುಳಿವು ನೀಡಿದರು.

ಸೋಮವಾರ ರಾಜ್ಯಾದ್ಯಂತ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನಕ್ಕೆ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದೇವೆ ಎಂದು ಬೊಮ್ಮಾಯಿ ತಿಳಿಸಿದರು.

ಯುವಜನತೆಯನ್ನು ಕೊರೋನಾ ಸುರಕ್ಷಾ ಚಕ್ರದ ಒಳಗೆ ತರಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿದೆ. ಇದಕ್ಕೆ ಶಿಕ್ಷಕರು, ಪೋಷಕರು, ಮಕ್ಕಳು ಎಲ್ಲರೂ ಸಹಕಾರ ನೀಡಬೇಕು ಎಂದು  ಮನವಿ ಮಾಡಿದರು.