ಪಡಿತರ ಆಹಾರದ ಮೇಲೆ ನೀಗಾ ಇಡಲು ಆ್ಯಪ್ ಅಭಿವೃದ್ಧಿ

ಮೈಸೂರು: ಪಡಿತರ ಆಹಾರದ ಮೇಲೆ ನೀಗಾ ಇಡುವ ಸಲುವಾಗಿ ಮೊಬೈಲ್ ಆ್ಯಪ್  ಅಭಿವೃದ್ಧಿ ಪಡಿಸಬೇಕು ಎಂದು ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಇಲಾಖೆಯ ಕೇಂದ್ರ ಸರ್ಕಾರದ ಕಾರ್ಯದರ್ಶಿಗಳಾದ ಸುಧಾಂಶು ಪಾಂಡೆ ಅವರು ತಿಳಿಸಿದರು.

ನಗರದ ಆಡಳಿತ ತರಬೇತಿ ಸಂಸ್ಥೆ ಆವರಣದಲ್ಲಿರುವ ಕಬಿನಿ ವಸತಿ ನಿಲಯದಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ವಿವಿಧ ಯೋಜನೆಗಳ ಅನುಷ್ಠಾನದ ಬಗ್ಗೆ ನಡೆದ ಸಭೆಯಲ್ಲಿ  ಅವರು ಮಾತನಾಡಿದರು.

ಇಂತಹ ಆ್ಯಪ್ ನಿಂದ ಪಡಿತರ ಆಹಾರದ ವಾಹನಗಳು ಎಲ್ಲಿ ಸಾಗುತ್ತದೆ, ಎಲ್ಲಿ ತಂಗುತ್ತದೆ ಎಂದು ತಿಳಿಯುತ್ತದೆ. ಯಾವುದೇ ರೀತಿಯಲ್ಲಿ ಪಡಿತರ ಆಹಾರ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು ಎಂದು ಹೇಳಿದರು.

ಆಡಳಿತ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಕಬಿನಿ ವಸತಿ ನಿಲಯದಲ್ಲಿ ನಡೆದ ಆಹಾರ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಎಲ್ಲಾ ಯೋಜನೆಗಳ ಅನುಷ್ಠಾನದ ಬಗ್ಗೆ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರವು ಎಲ್ಲರಿಗೂ ರೇಷನ್ ಸಿಗಲಿ ಎಂಬ ಉದ್ದೇಶದಿಂದ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆ ತಂದಿದ್ದು, ಇದರ ಸೌಲಭ್ಯ ಎಲ್ಲರಿಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೆಲಸಕ್ಕಾಗಿ ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೆ ತೆರಳುವ ಕೂಲಿ ಕಾರ್ಮಿಕರು ಸೌಲಭ್ಯವಂಚಿತರಾಗಿದ್ದು, ಇಂತಹವರನ್ನು ಗುರುತಿಸಿ, ಅವರಿಗೆ ಹತ್ತಿರದ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸುಧಾಂಶು ಪಾಂಡೆ ಸೂಚಿಸಿದರು.

ಸಭೆಯಲ್ಲಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಬೆಂಗಳೂರು ಆಯುಕ್ತರಾದ ಶಮ್ಲಾ ಇಕ್ಬಾಲ್, ಭಾರತ ಆಹಾರ ನಿಗಮದ ಕಾರ್ಯನಿವಾರ್ಹಕ ನಿರ್ದೇಶಕ ದಲ್ಜಿತ್ ಸಿಂಗ್, ಪ್ರಧಾನ ವ್ಯವಸ್ಥಾಪಕ ನರಸಿಂಹರಾಜು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಮೈಸೂರಿನ ಜಂಟಿ ನಿರ್ದೇಶಕರಾದ ಕುಮುದಾ ಶರತ್ ಮತ್ತಿತರರು ಹಾಜರಿದ್ದರು.