ಸಾಂಸ್ಕೃತಿಕ ನಗರಿಯಲ್ಲಿ ಗುಂಡಿಗಳ ಕಾರುಬಾರು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಮೈಸೂರು:ಸಾಂಸ್ಕೃತಿಕ ನಗರಿ ಮೈಸೂರಿನ ತುಂಬಾ ಗುಂಡಿಗಳದ್ದೇ ಕಾರುಬಾರಾಗಿಬಿಟ್ಟಿದೆ.

ಮೈಸೂರಿನ ನ್ಯೂಕಾಂತರಾಜ ಅರಸು ರಸ್ತೆ, ಕೃಷ್ಣಮೂರ್ತಿಪುರಂ ರಾಮ ಮಂದಿರದ ಎದುರು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ 30ಕ್ಕೂ ಹೆಚ್ಚು ಗುಂಡಿಗಳಿವೆ.

ಇದೊಂದು ರಸ್ತೆಯಲ್ಲೇ ಹೀಗಾದರೆ ಇಡೀ ನಗರದಲ್ಲಿ ಅದೆಷ್ಟು ಅವೈಜ್ಞಾನಿಕ ಹಳ್ಳಕೊಳ್ಳಗಳು, ಗುಂಡಿಗಳು ಇರಬಹುದು ಯೋಚಿಸಿ.

ಈ ಗುಂಡಿಗಳಿಂದಾಗಿ ನಾಗರೀಕರಿಗೆ ಆಗುತ್ತಿರುವ ತೊಂದರೆ ಹೇಳತೀರದು.

ಕಳೆದ ಎರಡು ಮೂರು ವರ್ಷಗಳಿಂದ ಮೈಸೂರು ನಗರದ ಬಹುತೇಕ ಮುಖ್ಯ ರಸ್ತೆಗಳು, ಸರ್ವಿಸ್ ರಸ್ತೆಗಳು  ಡಾಂಬರೀಕರಣ ಭಾಗ್ಯ ಕಂಡಿಲ್ಲ.

ರಸ್ತೆ ಗುಂಡಿಗಳಿಂದಾಗಿ ಅಫಘಾತ ಸಂಭವಿಸಿ ಹಿರಿಯ ನಾಗರೀಕರು, ಮಹಿಳೆಯರು  ಬಿದ್ದು ಗಾಯಗೊಂಡಿರುವ ಸಾಕಷ್ಯ ಉದಾಹರಣೆಗಳಿವೆ.

ಅಂಕು ಡೊಂಕಾದ ಹಳ್ಳಕೊಳ್ಳಗಳಿಂದ ಕೂಡಿದ ರಸ್ತೆಗಳು, ವಾಹನ ಸಂಚಾರ ಹೆಚ್ಚಿರುವ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರ, ರಸ್ತೆ ಸುರಕ್ಷತೆಯ ಬಗ್ಗೆ ಸಂಚಾರಿ ಪೊಲೀಸರಾಗಲಿ ಹಾಗೂ ಮೈಸೂರು ನಗರಪಾಲಿಕೆ ಗಮನ ಹರಿಸದಿರುವುದು ನಿಜಕ್ಕೂಬೇಸರದ ಸಂಗತಿ

ಕೇವಲ ಸಿಸಿ ಕ್ಯಾಮರದಲ್ಲಿ ನೋಡಿ ಹೆಲ್ಮೆಟ್ ಹಾಕದವರಿಗೆ ದಂಡ, ನೋಪಾರ್ಕಿಂಗ್ ಗಲಲ್ಲಿ ವಾಹನ ನಿಲ್ಲಿಸುವವರಿಗೆದಂಡ ವಿಧಿಸುವ ಅಧಿಕಾರಿಗಳಿಗೆ ಹಳ್ಳಕೊಳ್ಳಗಳು ಅದರಿಂದಾದ ಅಪಘಾತಗಳ ಬಗ್ಗೆ ತಿಳಿಯುವುದಿವಲ್ಲವೇ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

ಅಕ್ಟೋಬರ್ ,ನವೆಂಬರ್ ನಲ್ಲಿ ಸುರಿದ ಮಳೆಯಿಂದಾಗಿ ಕೆಲವೆಡೆ ಮರಳು,ಕಸ ಕಲ್ಲು ಕಡ್ಡಿ ಮತ್ತಿತರ ತ್ಯಾಜ್ಯ ನಗರದ ವೃತ್ತಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ತುಂಬಿದೆ.

ಇದು ಅಪಘಾತಗಳಿಗೆ ಅಹ್ವಾನ ನೀಡುತ್ತಿದೆ. ಈ ಬಗ್ಗೆ ನಾಗರೀಕರು ನಗರಪಾಲಿಕೆಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ‌ ಶಾಪ ಮಂದ ಕಿವಿಯ ಅಧಿಕಾರಿಗಳಿಗೆ ಕೇಳಿಸುವುದಿಲ್ಲ.

ರಸ್ತೆ ಗುಂಡಿ ಮುಚ್ಚಲು ಈಗಾಗಲೇ ನಿಗಧಿಯಾಗಿರುವ ಹಣವನ್ನ ಬಿಡುಗಡೆ ಮಾಡಿ ಡಾಂಬರೀಕರಣಕ್ಕೆ ಆಯುಕ್ತರು ಅವಕಾಶ ಮಾಡಿಕೊಡಲಿ.

ಅಧಿಕಾರಿಗಳು ಎಸಿ ಕಾರಿನಿಂದ ರಸ್ತೆಗಿಳಿದು ಜನರಜೀವ ಉಳಿಸಲು ಮುಂದಾಗಲಿ.

ಅಪಾಯದ ಗುಂಡಿಗಳ ವೀಕ್ಷಣೆ ಮಾಡಿ ಗುಂಡಿ ಮುಚ್ಚಿ ನಾಗರೀಕರ  ಪ್ರಾಣ ರಕ್ಷಣೆ ಮಾಡಲಿ.

ಅಭಿವೃದ್ಧಿ ಅಧಿಕಾರಿಗಳು ವಲಯ ಇಂಜಿನಿಯರ್ ಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಕ್ಷೇತ್ರ ಹಾಗೂ ವಾರ್ಡ್ ವ್ಯಾಪ್ತಿಯಲ್ಲಿ ಅಪಘಾತವಾಗುವ ಅಪಾಯದ ಗುಂಡಿಗಳನ್ನ ಗುರುತಿಸಿ ಸರಿಪಡಿಸಲು ಮುಂದಾದರೆ ಒಳಿತು.

ಇಲ್ಲವಾದಲ್ಲಿ ನಗರಪಾಲಿಕೆ ಮುಂಭಾಗ ಮೈಸೂರು ರಸ್ತೆಯ ಗುಂಡಿಗಳ ಪೋಟೋ ಎಕ್ಸಿಬಿಷನ್ ಹಮ್ಮಿಕೊಂಡು ಮುಖ್ಯಮಂತ್ರಿಗಳನ್ನ ಆಹ್ವಾನಿಸಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಅಜಯ್ ಶಾಸ್ತ್ರಿ ಎಚ್ಚರಿಸಿದ್ದಾರೆ.