ಕಾಲೇಜಿನಲ್ಲಿ ಹೆಲ್ಮೆಟ್ ಕದಿಯುತ್ತಿದ್ದ ಐನಾತಿ ಕಳ್ಳ ಸಿಕ್ಕಿಬಿದ್ದ

ಮೈಸೂರು: ವಿದ್ಯಾರ್ಥಿಗಳು ನಿಲ್ಲಿಸಿರುತ್ತಿದ್ದ ಬೈಕ್ ಗಳಲ್ಲಿನ ಹೆಲ್ಮೆಟ್ ಕದಿಯುತ್ತಿದ್ದ ಐನಾತಿ ಕಳ್ಳನೊಬ್ಬನನ್ನು ಕಾಲೇಜಿನ ಹುಡುಗರು ಹಿಡಿದು ಕೊಟ್ಟಿರುವ ಘಟನೆ ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ.

ಹೆಲ್ಮೆಟ್ ಕಳ್ಳನನ್ನು ಪ್ರವೀಣ್ ಎಂದು ಗುರುತಿಸಲಾಗಿದೆ.

ಕಳೆದ ಎರಡು ವಾರಗಳ ಹಿಂದೆಯೂ ಈ ಕಳ್ಳ  ಆರಾಮವಾಗಿ ಬೈಕ್ ನಲ್ಲಿ ಬಂದು ವಿದ್ಯಾರ್ಥಿಗಳು ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳ ಸಾಲಿನಲ್ಲಿ ತಾನು ಬಂದಿದ್ದ ಬೈಕ್ ನಿಲ್ಲಿಸಿ ಪಕ್ಕದ ಗಾಡಿಯಲ್ಲಿ ಲಾಕ್ ಮಾಡಿಟ್ಟಿದ್ದ ಹೆಲ್ಮೆಟ್ ಅನ್ನು  ಕತ್ತರಿಸಿ ಕದ್ದು ಒಯ್ಯುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮತ್ತೆ ಇದೇ ಕಾಲೇಜಿನಲ್ಲಿ ಈ ಕಳ್ಳ ಹಲ್ಮೆಟ್ ಕದಿಯುವಾಗಲೇ ಸಿಕ್ಕಿಬಿದ್ದಿದ್ದಾನೆ.

ವಿದ್ಯಾವರ್ಧಕ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಸಿ ಎಸ್ ಇ  ಸಿ ಸೆಕ್ಷನ್  ಮೂರನೆ ಸೆಮಿಸ್ಟರ್  ವಿದ್ಯಾರ್ಥಿಗಳು ಈ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ನಂತರ ಕಾಲೇಜಿನ ಪ್ರಾಂಶುಪಾಲರಾದ ಡಾ. ಸದಾಶಿವೆ ಗೌಡ ಹಾಗೂ  ಎಸ್ ಸಿಯ ಎಚ್ ಒ ಡಿ ಡಾ. ರವಿಕುಮಾರ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವಿಜಯನಗರ ಠಾಣೆ ಪೊಲೀಸರಿಗೆ  ಹೆಲ್ಮೆಟ್ ಕಳ್ಳ ಪ್ರವೀಣನನ್ನು ಒಪ್ಪಿಸಲಾಗಿದ್ದು  ಅವರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.