ಕಾಂಗ್ರೆಸ್ ಓಟಕ್ಕೆ ಹೆದರಿದ ಬಿಜೆಪಿ ಸರ್ಕಾರ -ನವೀನ್ ಕುಮಾರ್ ಆರೋಪ

ಮೈಸೂರು:ರಾಜ್ಯದಲ್ಲಿ ಓಮಿಕ್ರಾನ್ ವೇಗಕ್ಕಿಂತ ಕಾಂಗ್ರೆಸ್ ಪಕ್ಷ ಮೇಕೆದಾಟು ವಿಷಯದಲ್ಲಿ ಹೊರಟ  ವೇಗಕ್ಕೆ ಹೆದರಿ ರಾಜ್ಯಾದ್ಯಂತ ರಾಜ್ಯ ಸರ್ಕಾರ ಕರ್ಫ್ಯೂ ಹೇರಿದೆ  ಎಂದು ಕಾಂಗ್ರೆಸ್ ಯುವ ಮುಖಂಡ ಎನ್.ಎಂ. ನವೀನ್ ಕುಮಾರ್ ಟೀಕಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಅನೇಕ ಸಂಘಟನಾತ್ಮಕ ಸಭೆಗಳು,ರ‍್ಯಾಲಿಗಳನ್ನು  ಇತ್ತೀಚಿನವರೆಗೂ ನಡೆಸಿದೆ.ಎಲ್ಲಾ ರ‍್ಯಾಲಿಗಳಲ್ಲಿಯೂ  ಪಕ್ಷದ ನಾಯಕರುಗಳಾದಿಯಾಗಿ ಯಾರು ಕೂರೂನಾ ಮುನ್ನೆಚ್ಚರಿಕೆ ವಹಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.

ಸದ್ಯ ಕಾಂಗ್ರೆಸ್ ಪಕ್ಷ ಮೇಕೆದಾಟು ವಿಷಯದಲ್ಲಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪಾದಯಾತ್ರೆ ಮಾಡಲು ಮುಂದಾಗಿರುವ ಈ ಸಂದರ್ಭದಲ್ಲಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಇನ್ನಿಲ್ಲದ ಕಾನೂನಿನ ಬೆದರಿಕೆ ಹಾಕುತ್ತಿರುವುದನ್ನು ಗಮನಿಸಿದರೆ ಮೇಕೆದಟು ವೇಗಕ್ಕೆ ಸರ್ಕಾರ ಹೆದರುತ್ತಿದೆ ಎಂದು ಹೇಳಿದ್ದಾರೆ.

ಮೇಕೆದಾಟು ಕುಡಿಯುವ ನೀರಿನ ಅತ್ಯಗತ್ಯ ಯೋಜನೆಯಾಗಿದೆ. ಮೂಲೆ ಸೇರಿದ್ದ ಈ ಯೋಜನೆಯನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಕೈಗೆತ್ತಿಕೊಂಡಿದ್ದರು.

ಕೇಂದ್ರ ಸರ್ಕಾರ ಮೌಖಿಕ ಒಪ್ಪಿಗೆ ಸಹಾ ನೀಡಿದೆ. ಕೇಂದ್ರ ಪರಿಸರ ಸಚಿವಾಲಯದ ಎನ್‌ ಒ ಸಿ ಮಾತ್ರ ಬೇಕಿದೆ. ಮೂರು ವರ್ಷಗಳಿಂದ ಅದನ್ನು ಪಡೆಯಲು ರಾಜ್ಯ ಸರ್ಕಾರಕ್ಕೆ ಆಗಲಿಲ್ಲ ಎಂದು ನವೀನ್ ಕುಮಾರ್  ದೂರಿದ್ದಾರೆ.