ಮೈಸೂರು:ಕೊರೊನಾ ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ವಾರಾಂತ್ಯ ಕರ್ಫ್ಯೂವನ್ನು ಸಂಘ ಸಂಸ್ಥೆಗಳ ಒಕ್ಕೂಟ ವಿರೋಧಿಸಿದೆ.
ವಾಸ್ತವದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು ಬೆಂಗಳೂರಿನಲ್ಲಿ ಮಾತ್ರ. ಇದಕ್ಕಾಗಿ ಇಡೀ ರಾಜ್ಯದಲ್ಲಿ ಕರ್ಫ್ಯೂ ಘೋಷಿಸುವುದು ಎಷ್ಟು ಸರಿ ಎಂದು ಒಕ್ಕೂಟದವರು ಪ್ರಶ್ನಿಸಿದ್ದಾರೆ.
ಈಗಾಗಲೇ ಆಗಿರುವ ಲಾಕ್‍ಡೌನ್, ಕರ್ಫ್ಯೂಗಳಿಂದಾಗಿ ಉದ್ಯಮಿಗಳು, ಸಣ್ಣ ವ್ಯಾಪಾರಿಗಳು ಬಳಲಿದ್ದಾರೆ. ಅವಶ್ಯಕತೆ ಇದ್ದರೆ ಕರ್ಫ್ಯೂ ಜಾರಿಗೊಳಿಸಲಿ. ಅದಕ್ಕೆ ನಾವೂ ಸಹಕರಿಸುತ್ತೇವೆ. ಅದನ್ನು ಬಿಟ್ಟು ಮತ್ತೆ ಮತ್ತೆ ಅನವಶ್ಯಕವಾಗಿ ಕರ್ಫ್ಯೂ ಘೋಷಿಸುವುದಕ್ಕೆ ವಿರೋಧವಿದೆ ಎಂದು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.
ಕೊರೊನಾ ಬೇರೆಲ್ಲಾ ಜ್ವರಗಳಂತೆ ಒಂದು ಜ್ವರ. ಇದು ಯಾವುದೇ ಕಾರಣಕ್ಕೂ ಮನುಕುಲವನ್ನು ಬಿಟ್ಟು ಹೋಗುವುದಿಲ್ಲ. ಇನ್ನು ಮುಂದೆಯೂ ಕೊರೊನಾ ಪ್ರಕರಣಗಳು ಇದ್ದೇ ಇರುತ್ತವೆ.
ಅದರೊಂದಿಗೆ ಬದುಕುವುದನ್ನು ನಾವು ಕಲಿಯಬೇಕು. ಪ್ರತಿ ಬಾರಿ ಲಾಕ್‍ಡೌನ್, ಕರ್ಫ್ಯೂ ಮಾಡುತ್ತಿದ್ದರೆ ಜೀವನ ನಡೆಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮೊದಲ ಅಲೆಯ ಸಮಯದಲ್ಲಾದರೆ ನಾವು ಕೊರೊನಾ ಎದುರಿಸಲು ಸಿದ್ಧರಾಗಿರಲಿಲ್ಲ. ಆದರೆ ಈಗ ಎರಡು ಅಲೆಗಳನ್ನು ದಾಟಿದ್ದೇವೆ. ಈ ಹೊತ್ತಿಗಾಗಲೇ ನಮ್ಮ ವೈದ್ಯಕೀಯ ಸೌಲಭ್ಯಗಳು ಎಲ್ಲವನ್ನೂ ಎದುರಿಸುವಷ್ಟು ಶಕ್ತವಾಗಿರಬೇಕು, ಸುರಕ್ಷತೆ ಅವಶ್ಯಕತೆ ಇದೆಯೇ ಹೊರತು ಲಾಕ್‍ಡೌನ್ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಮೈಸೂರಿನಲ್ಲಂತೂ ಕೊರೊನಾ ಮೂರಂಕಿ ದಾಟಿಲ್ಲ. ಅಲ್ಲದೆ ಡೆತ್ ರೇಟ್ ಹಾಗೂ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಸಹ ಕಡಿಮೆ ಇದೆ. ಮತ್ತೆ ಕರ್ಫ್ಯೂ ಅಗತ್ಯವಿಲ್ಲ ಎಂದಿದ್ದಾರೆ.
ಮೈಸೂರು ಪ್ರವಾಸೋದ್ಯಮವನ್ನೇ ಕೇಂದ್ರವಾಗಿರಿಸಿಕೊಂಡಿರುವ ನಗರಿ. ಮೈಸೂರಿಗೆ ಜನರು ಬರದಂತೆ ಮಾಡಿದರೆ ಇಲ್ಲಿನ ಜನರು ದುಡಿಯವುದು ಹೇಗೆ, ಜೀವನ ನಡೆಸುವುದು ಹೇಗೆ ಎಂದಿದ್ದಾರೆ.
ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿರುವ ಬೆಂಗಳೂರಿನಲ್ಲಿ ಬೇಕಿದ್ದರೆ ಸರ್ಕಾರ ಲಾಕ್‍ಡೌನ್, ಕರ್ಫ್ಯೂ ಮಾಡಲಿ. ಆದರೆ ಮೈಸೂರಿನಲ್ಲಿ ಬೇಡ ಎಂದು ಪ್ರಶಾಂತ್ ಒತ್ತಾಯಿಸಿದ್ದಾರೆ.

