ಮೈಸೂರು:ವೈಕುಂಠ ಏಕಾದಶಿ ಪ್ರಯುಕ್ತ ಮೈಸೂರಿನಲ್ಲಿರುವ ವಿಷ್ಣು, ವೆಂಕಟೇಶ್ವರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು.
ಗುರುವಾರ ಮುಂಜಾನೆಯಿಂದಲೇ ದೇವಾಲಯಗಳನ್ನು ತಳಿರು ತೋರಣ ಹಾಗೂ ಹೂಗಳಿಂದ ಸಿಂಗರಿಸಲಾಗಿತ್ತು.
ಅರ್ಚಕರು ಶ್ರದ್ಧಾ ಭಕ್ತಿಯಿಂದ ಪೂಜಾ ಕೈಂಕರ್ಯದಲ್ಲಿ ತೊಡಗಿಸಿಕೊಂಡರು.
ಮೈಸೂರಿನ ನಂಜನಗೂಡು ರಸ್ತೆಯ ಶ್ರೀಗಣಪತಿ ಸಚ್ಚಿದಾನಂದ ಆಶ್ರಮದ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಸೇವೆ ನಡೆಯಿತು.
ದತ್ತ ವೆಂಕಟೇಶ್ವರನು ಸರ್ವಾಲಂಕಾರ ಭೂಷಿತನಾಗಿ, ಗರುಡಾರೂಢನಾಗಿ,ಅಭಯ ಹಸ್ತನಾಗಿ, ಭಕ್ತವರಪ್ರದನಾಗಿ ಕಂಗೊಳಿಸುತ್ತಿದ್ದಾನೆ.
ಗಣಪತಿ ಸಚ್ಚಿದಾನಂದ ಶ್ರೀಗಳು ಶ್ರೀದೇವರಿಗೆ ವಿಶೇಷ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿ, ಜಗತ್ತಿಗೆ ಆವರಿಸಿರುವ ಸಾಂಕ್ರಾಮಿಕ ಕೊರೋನಾವು ಶೀಘ್ರದಲ್ಲಿ ತೊಲಗಿ ಜನತೆ ಸುಖ, ಸಂತೋಷ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಕಳೆದೆರಡು ವರ್ಷಗಳಿಂದ ದೇವರ ದರ್ಶನಕ್ಕೆಅವಕಾಶವೇ ಇರಲಿಲ್ಲ,ಆದರೆ ಈ ಬಾರಿ 50 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ದೇವಸ್ಥಾನದ ಉತ್ತರ ದ್ವಾರದಲ್ಲಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆ 7ಗಂಟೆಯಿಂದಲೇ ಅವಕಾಶ ಕಲ್ಪಿಸಲಾಗಿ ತ್ತು.
ಎರಡು ಡೋಸ್ ಲಸಿಕೆ ಪಡೆದು ದಾಖಲೆ ತೋರಿಸಿದವರಿಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.
ಭಕ್ತರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ದೇವರ ದರ್ಶನ ಪಡೆದರು.
ದೇವಸ್ಥಾನಗಳಲ್ಲಿ ಕೇವಲ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ತೀರ್ಥಪ್ರಸಾದ ವಿತರಣೆ ಇರಲಿಲ್ಲ.
ಪರಮ ಪುಣ್ಯ ದಿನ: ವೈಕುಂಠ ಏಕಾದಶಿಯಂದು ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಬಂದು ಭಕ್ತರಿಗೆ ದರ್ಶನ ಭಾಗ್ಯ ಕೊಡುವ ಪರಮ ಪುಣ್ಯ ದಿನ ಎಂದೇ ನಂಬಲಾಗುತ್ತದೆ.
ವೈಕುಂಠ ಏಕಾದಶಿಯಂದು ಶ್ರೀಹರಿಯನ್ನು ಪೂಜಿಸುವುದರಿಂದ ಪಾಪಗಳನ್ನು ಕಳೆದುಕೊಳ್ಳಬಹುದು ಎಂದೇ ನಂಬಲಾಗಿದೆ.
ಮನುಷ್ಯ ಜೀವನದ ಪಯಣದ ಹಾದಿಯಲಿ ಸಾಧನೆಗೆ ರಹದಾರಿ ಮಾಡಿಕೊಡುವ ದಿನ. ಈ ದಿನ ಮನಸ್ಸಿನಲ್ಲಿ ಒಳ್ಳೆಯ ಯಾವುದೇ ಕಾರ್ಯ ಸಂಕಲ್ಪಿಸಿ ಅದೇ ದಾರಿಯಲಿ ಮುಂದುವರಿದರೆ ಯಶಸ್ಸು ಸಿದ್ದ.
ಉತ್ತರ ದ್ವಾರದಿಂದ ದೇವರ ದರುಶನ ಮಾಡಿದರೆ ಮೋಕ್ಷ ಪ್ರಾಪ್ತಿ ಎಂದು ಹೇಳುತ್ತಾರೆ.
ಈ ದಿನ ಯಾರಾದರೂ ನಿಧನ ಹೊಂದಿದಲ್ಲಿ ಅವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆ ನಮ್ಮಲ್ಲಿದೆ.
ವಿಷ್ಣು ಮೂರು ಅಸುರರನ್ನು ಏಕಾದಶಿ ಎಂಬ ಆಯುಧದಿಂದ ಸಂಹರಿಸಿದ ದಿನ. ಭೀಷ್ಮಾಚಾರ್ಯರು ವಿಷ್ಣು ಸಹಸ್ರನಾಮ ಹೇಳಿದ ದಿನ, ಮುಕ್ಕೋಟಿ ದೇವತೆಗಳಿಗೆ ವಿಷ್ಣು ದರ್ಶನ ಕೊಡುವ ದಿನ. ಆದ್ದರಿಂದ ಈ ಏಕಾದಶಿಗೆ ಬಹಳ ಮಹತ್ವವಿದೆ ಎಂದು ಪುರಾಣಗಳು ತಿಳಿಸುತ್ತವೆ.

