ಮೈಸೂರು: ಶ್ರೀ ಬಾಲಗಂಗಾಧರನಾಥ ಶ್ರೀಗಳು ಒಂದು ಜನಾಂಗಕ್ಕೆ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ ಎಲ್ಲಾ ಜನಾಂಗ ಹಾಗೂ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಿದ ಮಹಾನ್ ಸಾಧಕರಾಗಿದ್ದಾರೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ತಿಳಿಸಿದರು
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಭಕ್ತವೃಂದ ಹಾಗೂ ಕೃಷ್ಣರಾಜ ಯುವ ಬಳಗ ವತಿಯಿಂದ ನಗರದ ಕುವೆಂಪು ನಗರದಲ್ಲಿರುವ ಆದಿಚುಂಚನಗಿರಿ ರಸ್ತೆಯಲ್ಲಿ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ 77ನೇ ವರ್ಷದ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ನಂತರ ಮಾತನಾಡಿದ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಆಕಾಶಕ್ಕೆ ಆಕಾಶವೇ ಸರಿಸಮಾನ. ಅಂತೆಯೇ ಬಾಲಗಂಗಾಧರನಾಥ ಸ್ವಾಮೀಜಿ ಸಾಧನೆಯ ಹಾದಿ ಬಲು ದೊಡ್ಡದು. ಶ್ರೀಗಳು ಹಾಕಿಕೊಟ್ಟ ದಾರಿಯಂತೆ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋಗುತ್ತಿರುವ ನಿರ್ಮಲಾನಂದನಾಥ ಸ್ವಾಮೀಜಿಯೂ ಅವರ ಸಾಲಿನಲ್ಲಿ ನಿಲ್ಲುತ್ತಾರೆಂದರು.
ನಂತರ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಮಾತನಾಡಿ, ಬಾಲಗಂಗಾಧರನಾಥ ಸ್ವಾಮೀಜಿ ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ, ನಾಡಿನ ಜನರ ಹೃದಯದಲ್ಲಿ ನಿರಂತರ ಚೈತನ್ಯರೂಪಿಯಾದ ಸ್ಥಾನವನ್ನು ಪಡೆದಿದ್ದಾರೆ. ಅಂತಹ ಗುರುಗಳ ಶಿಷ್ಯರಾದ ನಾವೆಲ್ಲರೂ ಪುಣ್ಯವಂತರು? ಎಂದರು.
ಬಾಲಗಂಗಾಧರನಾಥ ಸ್ವಾಮಿಗಳು ಸಾಧಿಸಿದ ಕಾರ್ಯಗಳು ಮನುಷ್ಯರಿಂದ ಮಾಡಲು ಸಾಧ್ಯವಿಲ್ಲ. ಅಂತಹ ಮಹತ್ಕಾರ್ಯಗಳನ್ನು ಸಾಧಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ತಮ್ಮ ಸಂಕಲ್ಪ ಮಾತ್ರದಿಂದಲೇ ಅದ್ವಿತೀಯ ಕಾರ್ಯಗಳನ್ನು ಸಾಧಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ, ಹಿರಿಯ ಸಮಾಜ ಸೇವಕರಾದ ಕೆ ರಘುರಾಂ ವಾಜಪೇಯಿ, ಮುಡಾ ಸದಸ್ಯರಾದ ಲಕ್ಷ್ಮೀದೇವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೃಷ್ಣರಾಜ ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ, ವಿನಯ್ ಕಣಗಾಲ್, ಗುಣಶೇಖರ್, ಲೋಹಿತ್, ಸುಚೀಂದ್ರ, ಸದಾನಂದ ಹಾಗೂ ಇತರರು ಇದ್ದರು.

