ಬೆಂಗಳೂರು: ರಾಜ್ಯದಂತ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೈಓಲ್ಟೇಜ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಚಿವ ಆರ್. ಅಶೋಕ್ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಹೊಟೇಲ್ ಮಾಲಿಕರು,ಉದ್ಯಮಿಗಳು,ಇತರೆ ವ್ಯಾಪಾರಸ್ತರು ಹಾಗೂ ಸಾರ್ವಜನಿಕರು ವೀಕೆಂಡ್ ಕರ್ಫ್ಯೂಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು.
ಅದರಲ್ಲೂ ರಾಜಕಾರಣಿಗಳು ಸಭೆ,ಸಮಾರಂಭ ಜಾತ್ರೆ ಮಾಡಬಹುದು.ಆದರೆ ಜನಸಾಮಾನ್ಯರು ಏನು ಮಾಡಿದರೂ ತಪ್ಪು,ಎಲ್ಲರಿಗೂ ಒಂದೇ ರೂಲ್ಸ್ ಇರಬೇಕಲ್ಲವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಯಾವುದೇ ಲಾಕ್ ಡೌನ್ ಆಗಲೀ,ವೀಕೆಂಡ್ ಕರ್ಫ್ಯೂ ಆಗಲೀ ಬೇಡ ಎಂಬ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಕಡೆಗೂ ಸರ್ಕಾರ ಮಣಿದಿದೆ.
ಈಗ ಮೂರನೆ ಅಲೆ ಇದ್ದರೂ ತೀವ್ರತೆ ಕಡಿಮೆ ಇದೆ.ಅಲ್ಲದೆ ಮಾರಣಾಂತಿಕ ಅಲ್ಲ ಹಾಗಾಗಿ ಲಾಕ್ ಡೌನ್,ಕರ್ಫ್ಯೂ ಬೇಡ ಎಂದು ಬಹುತೇಕ ಸಚಿವರು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದರು.
ಸೋಂಕು ಅತಿ ಹೆಚ್ಚಾಗಿರುವ ಜಿಲ್ಲೆಗಳು ಅಥವಾ ಪ್ರದೇಶಗಳಲ್ಲಿ ಟಫ್ ರೂಲ್ಸ್ ಇರಲಿ ಎಂಬ ಸಲಹೆಗಳು ಸಭೆಯಲ್ಲಿ ಬಂದವು.
ರಾತ್ರಿ 10ರ ಬದಲು 11ರಿಂದ ಮುಂಜಾನೆ 5 ಗಂಟೆ ವರೆಗೆ ಕರ್ಫ್ಯೂ ಇರಲಿ ಎಂಬ ಸಲಹೆಯೂ ಬಂದವು
ಬೆಂಗಳೂರಿನಲ್ಲಿ ಅತಿ ಹೆಚ್ಚು ಕೇಸುಗಳಿರುವುದರಿಂದ ಕಠಿಣ ನಿಯಮಗಳು ಇರಲಿ ಎಂದು ತಜ್ಞರು ಮುಖ್ಯ ಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.ಜತೆಗೆ ಬಿಬಿಎಂಪಿ ಆಯುಕ್ತರು ಇನ್ನು ಒಂದು ವಾರ ಬೆಂಗಳೂರಿನಲ್ಲಿ ವೀಕೆಂಡ್ ಲಾಕ್ ಡೌನ್ ಇರುವಂತೆ ಕೋರಿದರು.
ಮದುವೆ,ಇತರೆ ಸಮಾರಂಭಗಳಿಗೆ ಎಂದಿನಂತೆ ನಿಯಮಗಳು ಮುಂದುವರಿಯಲಿದೆ.
ಬೆಂಗಳೂರಿನಲ್ಲಿ 5-9ನೆ ತರಗತಿಗಳನ್ನು ಪ್ರಾರಂಭಿಸಲು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮನವಿ ಮಾಡಿದ್ದಾರೆ.
ಒಟ್ಟಾರೆ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಆಲಿಸಿದ ಮುಖ್ಯ ಮಂತ್ರಿಗಳು ವೀಕೆಂಡ್ ಲಾಕ್ ಡೌನ್ ಹಿಂತೆಗೆದುಕೊಳ್ಳಲು ನಿರ್ಧರಿಸಿದ್ದಾರೆಂದು ಅಶೋಕ್ ಸ್ಪಷ್ಟಪಡಿಸಿದರು.
ಜನವರಿ ಕೊನೆಯ ತನಕ ನೈಟ್ ಕರ್ಫ್ಯೂ ಮುಂದುವರಿಯಲಿದೆ.ಒಂದು ವೇಳೆ ಸೋಂಕು ಅತಿ ಹೆಚ್ಚಾದರೆ ಮತ್ತೆ ಕಠಿಣ ನಿಯಮಗಳು ಜಾರಿಯಾಗುವುದು ಅನಿವಾರ್ಯ ಎಂದು ಹೇಳಿದರು.
ಎಲ್ಲವೂ ಜನರ ಕೈನಲ್ಲೇ ಇದೆ.ಜನ ಹೆಚ್ಚಾಗಿ ಸೇರಬಾರದು ದಯವಿಟ್ಟು ಎಲ್ಲರೂ ನಿಯಮ ಪಾಲಿಸಿ ಎಂದು ಅಶೋಕ್ ಮನವಿ ಮಾಡಿದರು.

