ಮೈಸೂರು:ಮತದಾನದ ಹಕ್ಕು ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವುದಕ್ಕಾಗಿ ನಮ್ಮ ಭಾರತೀಯ ಸಂವಿಧಾನವು ಜನತೆಗೆ ನೀಡಿರುವ ಒಂದು ಬಲವಾದ ಅಸ್ತ್ರವಾಗಿದ್ದು
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ಪಾತ್ರ ಮಹತ್ವವಾದುದು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ತಿಳಿಸಿದರು.
ಮೈಸೂರು ಜಿಲ್ಲಾಡಳಿತ ಹಾಗೂ ಮೈಸೂರು ಮಹಾನಗರ ಪಾಲಿಕೆಯ ವತಿಯಿಂದ ಪಾಲಿಕೆಯಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ವೇಳೆ ಅವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಂಡ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಿ ಮಾತನಾಡಿದರು.
ಮತದಾನ ಜನರ ಮೂಲಭೂತ ಹಕ್ಕಾಗಿದ್ದು ಪ್ರಜೆಗಳಿಂದ ಆಯ್ಕೆಯಾದ ಸರ್ಕಾರ ಜನರ ಆಶೋತ್ತರಗಳಿಗೆ ನಡೆಯಬೇಕೆಂಬುದೇ ಸಂವಿಧಾನದ ಆಶಯವಾಗಿದೆ ಎಂದು ತಿಳಿಸಿದರು.
ಮತದಾನದ ಮಹತ್ವ ಮತ್ತು ಪ್ರಜೆಗಳ ಮೇಲಿರುವ ಜವಾಬ್ದಾರಿ ಕುರಿತು ಜಾಗೃತಿ ಮೂಡಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಅದರಲ್ಲೂ ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಎಂದರು.
18ವರ್ಷ ಮೇಲ್ಪಟ್ಟ ಯುವಜನತೆ ಮತದಾನದ ಹಕ್ಕನ್ನು ಹೊಂದಿದ್ದು 18 ವರ್ಷ ಮೇಲ್ಪಟ್ಟವರು ತಮ್ಮ ಹೆಸರು ನೋಂದಾಯಿಸಿ,ಮತ ಚಲಾಯಿಸುವ ಗುರುತಿನ ಪತ್ರವನ್ನು ಪಡೆದು ಮತ ಚಲಾಯಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಮಹಾನಗರ ಪಾಲಿಕೆಯ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

