ಮೈಸೂರು: ಮನೆ ಮನೆಗೆ ನೀರಿನ ಸಂಪರ್ಕ ಕಲ್ಪಿಸಿದಂತೆ ಪೈಪ್ ಮೂಲಕ ಅನಿಲ ಸಂಪರ್ಕ ಕಲ್ಪಿಸುವುದರಿಂದ ಜನತೆಗೆ ಹೊರೆ ಕಡಿಮೆಯಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಗ್ಯಾಸ್ ಪೈಪ್ ಲೈನ್ ಅತ್ಯಂತ ಮಹತ್ವದ್ದು. ಸಿಲಿಂಡರ್ ಬೆಲೆ 904 ರೂಪಾಯಿ ಇದೆ. ಗ್ಯಾಸ್ ಸಿಲಿಂಡರ್ ಅನ್ನು ಮನೆಗೆ ಸಾಗಿಸಲು ಪ್ರತ್ಯೇಕ ಬೆಲೆ ಇರುತ್ತದೆ ಎಂದು ಹೇಳಿದರು.
ಗ್ಯಾಸ್ ಸ್ಪೋಟ ಪ್ರಕರಣಗಳು ಆಗಾಗ ನಡೆಯುತ್ತಿರುತ್ತದೆ. ಇದನ್ನು ತಪ್ಪಿಸಲು ನ ಮನೆ ಮನೆಗೆ ನಲ್ಲಿಯಲ್ಲಿ ನೀರು ಬರುವಂತೆ ಗ್ಯಾಸ್ ಕೂಡ ಮನೆಗೆ ಬರಬೇಕು ಇದರಿಂದ ಜನರಿಗೆ ಹೊರೆ ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿ ಇದನ್ನು ಮೊದಲು ಆರಂಭಿಸಿದ್ದರು. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ತುಮಕೂರು, ಹಾಸನ, ಶಿವಮೊಗ್ಗ, ಹುಬ್ಬಳಿ ಧಾರಾವಾಡ, ಚಿತ್ರದುರ್ಗ, ಕಲಬುರ್ಗಿ ಹೀಗೆ ಹಲವು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ಕೊಡಲಾಗಿದೆ ಎಂದು ಹೇಳಿದರು.
ಎಲ್ ಪಿ ಜಿ 904 ರೂಪಾಯಿ ಇದೆ. ಗ್ಯಾಸ್ ಪೈಪ್ ಲೈನ್ ಬಂದರೆ ಅದು 500 ರೂ ಗೆ ಸಿಗುತ್ತದೆ. ಜನರಿಗೆ 400 ರೂಪಾಯಿ ಉಳಿತಾಯವಾಗುತ್ತದೆ. ಗ್ಯಾಸ್ ಪೈಪ್ ಲೈನ್ ಗೆ ಬಳಸಿದ ಜಾಗಕ್ಕೆ ಅನುಗುಣವಾಗಿ ಪಾಲಿಕೆಗೆ ಹಣ ಕೊಡುತ್ತೇವೆ ಎಂದರು.
ಪೈಪ್ ಲೈನ್ ಹಾಕಲು ತೆಗೆದ ತಗ್ಗನ್ನು 24 ಗಂಟೆಯೊಳಗೆ ಮುಚ್ಚಬೇಕು. ಖಾಸಗಿ ಮೊಬೈಲ್ ಕಂಪನಿಗಳು ರಸ್ತೆ ಅಗೆದಾಗ ಈಗ ಮಾತಾಡುತ್ತಿರುವವರು ಯಾಕೆ ಸುಮ್ಮನೆ ಇದ್ದರು ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದರು.
ಗ್ಯಾಸ್ ಪೈಪ್ ಲೈನ್ ಕೂಡ ಮಹತ್ತರ ಯೋಜನೆ, ಎಲ್ ಪಿ ಜಿಗೂ ಎಲ್ ಎನ್ ಜಿ ಗೂ ವ್ಯತ್ಯಾಸವಿದೆ. ಮನೆಯಲ್ಲಿರುವ ಇಬ್ಬರು ದುಡಿಯಲು ಹೋದಾಗ ಸಿಲಿಂಡರ್ ಖಾಲಿಯಾಗಿ ಬುಕ್ಕಿಂಗ್ ಮಾಡಿ ಕಾಯಬೇಕು. ಎಲ್ ಪಿ ಜಿ ಅವಘಡವಾಗಿ ಬ್ಲಾಸ್ಟ್ ಆಗುವ ಸಾಧ್ಯತೆ. ಆದರೆ ಎನ್ ಪಿ ಜಿ ಗಾಳಿಗಿಂತ ಹಗುರ. ಗಾಳಿಜೊತೆ ಬೆರೆತು ಹೊರಟುಹೋಗುತ್ತದೆ ಎಂದು ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮೈಸೂರು ನಗರದ ಬಿಜೆಪಿ ಪ್ರಧಾನಕಾರ್ಯದರ್ಶಿ ಗಿರಿಧರ್, ವಾಣೀಶ್, ಸೋಮಸುಂದರ್, ಮೈಸೂರು ಗ್ಯಾಸ್ ಪೈಪ್ ಲೈನ್ ಜವಾಬ್ದಾರಿ ಹೊಂದಿರುವ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

