ಒಳಗಣ್ಣಿನಿಂದ ನೋಡಿದರೆ ಮಾತ್ರ ಪ್ರಕೃತಿ ಬಗ್ಗೆ ಭಾವನೆ ಮೂಡಲು ಸಾಧ್ಯ-ಗೋಪಾಲ್

ಮೈಸೂರು:ಪ್ರಕೃತಿಯನ್ನು ಒಳಗಣ್ಣಿನಿಂದ ನೋಡಿದರೆ ಮಾತ್ರ ಭಾವನೆ ಮೂಡಲು ಸಾಧ್ಯ ಎಂಬುದನ್ನು ವರಕವಿ ದ.ರಾ.ಬೇಂದ್ರ ತಮ್ಮ ಕವನ ಮತ್ತು ಕಾವ್ಯಗಳಿಂದ ನಿರೂಪಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ತಿಳಿಸಿದರು.

ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ದ.ರಾ.ಬೇಂದ್ರೆ 126ನೇ ಜಯಂತಿ ಅಂಗವಾಗಿ  ಮೈಸೂರಿನ ಚಾಮುಂಡಿಪುರಂನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಸೋಮವಾರ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ

ಬೇಂದ್ರೆ ನೆನಪು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬೇಂದ್ರೆ ಅವರು ಪ್ರಪಂಚದಲ್ಲಿ ಕನ್ನಡ ಸೇವೆಗೆ ಇರುವ ಅವಕಾಶ ಬಳಸಿಕೊಂಡು ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಬೇಂದ್ರೆಯವರು ಸಾಹಿತ್ಯ, ಕೃತಿ, ನಾಟಕ, ಕವನ, ಕಾವ್ಯದ ಮೂಲಕ ನೊಂದ ಜೀವಗಳಲ್ಲಿ ಬದುಕಿನ ಉತ್ಸಾಹದ ಚಿಲುಮೆ ಉಕ್ಕಿಸಿದರು ಎಂದು ಹೇಳಿದರು.

ಬೇಂದ್ರೆ ಕೇವಲ ಕವಿ, ಸಾಹಿತಿಯಷ್ಟೇ ಆಗಿರಲಿಲ್ಲ, ಇತಿಹಾಸಕಾರ, ಸಂಸ್ಕೃತ ವಿದ್ವಾಂಸ, ಭೌತಶಾಸ್ತ್ರ, ಗಣಿತ ತಜ್ಞ, ಸಂಖ್ಯಾಶಾಸ್ತ್ರಜ್ಞ,ತತ್ವಜ್ಞಾನಿ ಹೀಗೆ ಅವರದು ಬಹುಮುಖ ವ್ಯಕ್ತಿತ್ವ ಎಂದು ಬಣ್ಣಿಸಿದರು.

ಅವರ ಕಾವ್ಯವು ಜನಪದ ಸೊಗಡು ಹಾಗೂ ಪ್ರಾಸದಿಂದ ಕೂಡಿದೆ ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ವೈ. ಡಿ. ರಾಜಣ್ಣ ಮಾತನಾಡಿ, ದ. ರಾ. ಬೇಂದ್ರೆಯವರು ಕವಿಯಾಗಿ ಕಥೆಗಾರರಾಗಿ ನಾಟಕಕಾರರಾಗಿ ತಮ್ಮ ಸಾಹಿತ್ಯದ ಉದ್ದಕ್ಕೂ ಬದುಕಿನ ಅನುಭವದ ಪಾಠವನ್ನು ,ಸಾಹಿತ್ಯದ ಶ್ರೇಷ್ಠತೆಯನ್ನು ಕೊಟ್ಟಂಥವರು ಎಂದು ಹೇಳಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಮಾತನಾಡಿ, ಬೇಂದ್ರೆಯವರ ಕವಿತೆಗಳು ಮುತ್ತಿನ ಹಾರದಂತಿವೆ ಎಂದು ಹೇಳಿದರು.

ಅವರ ಭಾಷೆ, ಸಂಸ್ಕೃತಿ ಪರಂಪರೆಯಿಂದ ಕನ್ನಡ ಸಾಹಿತ್ಯ ಶ್ರೀಮಂತವಾಗಿದೆ. ಅವರು ನಾಡಿನ ಸಮಸ್ತ ಮನುಕುಲಕ್ಕೆ ಕನ್ನಡದ ಕಾವ್ಯ ಹಾಗೂ ಸಾಹಿತ್ಯದ ಬೆಳಕು ಚೆಲ್ಲಿದರು ಎಂದು ತಿಳಿಸಿದರು.

ಚುಟುಕು ಸಾಹಿತ್ಯ ಪರಿಷತ್ ನ ರಾಜ್ಯ ಸಂಚಾಲಕ   ಡಾ. ಎಂ ಜಿ ಆರ್  ಅರಸ್, ಕನ್ನಡ ಸಾಹಿತ್ಯ ಪರಿಷತ್  ಮಾಜಿ ಅಧ್ಯಕ್ಷ ಚಂದ್ರಶೇಖರ್, ನಗರಪಾಲಿಕೆ ಸದಸ್ಯ ಮಾ. ವಿ. ರಾಮ್ ಪ್ರಸಾದ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಗೋಲ್ಡ್ ಸುರೇಶ್, ವಿದ್ಯಾರಣ್ಯ ಸಂಸ್ಥೆಯ ರವಿಶಂಕರ್, ಜೀವದರ ಗಿರೀಶ್, ವಿನಯ್ ಕಣಗಾಲ್, ಸುಚೇಂದ್ರ, ಪುರುಷೋತ್ತಮ್, ಮಹೇಂದ್ರ ಎಂ  ಶೈವಾ, ಚಕ್ರಪಾಣಿ, ನವೀನ್ ಕೆಂಪಿ, ವೆಂಕಟೇಶ್ವರ ವರ್ಕೇಡಿ  ಮತ್ತಿತರರು ಹಾಜರಿದ್ದರು.