ಏಕಾಂಗಿಯಾಗಿ ರೆಸಾರ್ಟ್ ನಲ್ಲಿ ಸಿದ್ದು: ರಾಜಕೀಯ ವಲಯದಲ್ಲಿ ಕುತೂಹಲ

ಮೈಸೂರು:ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಎಲ್ಲಾ ಜಂಜಡಗಳನ್ನು ಬಿಟ್ಟು ನೆಮ್ಮಾದಿಯಾಗಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಿದ್ದರಾಮಯ್ಯ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆಯ ಖಾಸಗಿ ರೆಸಾರ್ಟ್ ನಲ್ಲಿ ತಂಗಿದ್ದಾರೆ.

ಸೋಮವಾರವೆ ರೆಸಾರ್ಟ್ ಗೆ ಬಂದಿರುವ ಅವರು ಮಂಗಳವಾರ ಕೂಡ ಅಲ್ಲಿಯೇ ತಂಗಲಿದ್ದಾರೆ.

ಸೋಮವಾರ ಮೈಸೂರಿನ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ ಹೆಚ್.ಡಿ. ಕೋಟೆಗೆ ಪ್ರಯಾಣ ಬೆಳೆಸಿ. ನಂತರ ಅಲ್ಲಿನ ರೆಸಾರ್ಟ್‍ನಲ್ಲಿ‌ ಉಳಿದುಕೊಂಡು ಆರಾಮ ಪಡೆಯುತ್ತಿದ್ದಾರೆ.

ತಮ್ಮ ವಿರುದ್ಧ ಸಿಡಿದೆದ್ದಿರುವ ಆಪ್ತ ಸಿ.ಎಂ. ಇಬ್ರಾಹಿಂ ಮೇಲ್ಮನೆ ಸದಸ್ಯತ್ವಕ್ಕೆ  ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಜೊತೆಗೆ  ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿದೆ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ರೆಸಾರ್ಟ್ ಗೆ ಬಂದಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.

ಸಿಎಂ ಇಬ್ರಾಹಿಂ ಕೋಪದಲ್ಲಿ ಮಾತನಾಡಿದ್ದಾರೆ. ಅವರೆಲ್ಲೂ ಹೋಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು.

ನಾನು ಇನ್ನೂ ಇಬ್ರಾಹಿಂ ಜೊತೆ ಮಾತುಕತೆ ನಡೆಸಿಲ್ಲ. ಇಬಾಹ್ರಿಂ ಎಲ್ಲೂ ಹೋಗುವುದಿಲ್ಲ ಕಾಂಗ್ರೆಸ್ ನಲ್ಲೇ ಇರುತ್ತಾರೆ. ಅವರು ಹಲವಾರು ಬಾರಿ ಪಕ್ಷ ಬಿಡುವ ಮಾತುಗಳನ್ನು ಹೇಳಿದ್ದಿದೆ ಎಂದಿದ್ದಾರೆ.

ರಾಜ್ಯಸಭಾ ಸದಸ್ಯರನ್ನಾಗಿ ಮಾಡದ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಬಿಟ್ಟಿದ್ದರು. ಆದರೆ ಈಗ ಸಿ.ಎಂ.ಇಬ್ರಾಹಿಂಗೆ ಅಂತಹ ಪರಿಸ್ಥಿತಿ ಬಂದಿಲ್ಲ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ.ಅವರೊಂದಿಗೆ ಕುಳಿತು ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.

ಇದೇ ವೇಳೆ ಸಿದ್ದರಾಮಯ್ಯನವರು ನನ್ನನ್ನು ಯಾರೂ ತಬ್ಬಲಿ ಮಾಡುವುದಕ್ಕೆ ಆಗುವುದಿಲ್ಲ. ರಾಜ್ಯದ ಜನರು ನನ್ನ ಜೊತೆ ಇರುವವರೆಗೆ ತಬ್ಬಲಿ ಆಗಲ್ಲ ಎಂದು ಪ್ರತಿಕ್ರಿಯೆ ನೀಡಿರುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

ಇದೇ ಸಮಯದಲ್ಲಿ ಸಿದ್ದು ಏಕಾಂಗಿಯಾಗಿ ರೆಸಾರ್ಟ್ ನಲ್ಲಿ ತಂಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.