ಮೈಸೂರು:ರಾಷ್ಟ್ರೀಯ ಸೇನಾ ದಿನಾಚರಣೆ ಅಂಗವಾಗಿ ಬ್ಲಡ್ ಆನ್ ಕಾಲ್ ಕ್ಲಬ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ಹಮ್ಮಿಕೊಂಡಿದ್ದ
ರಕ್ತದಾನ ಶಿಬಿರದಲ್ಲಿ ಭಾರತದ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ರಕ್ತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾದರು.
ರಾಷ್ಟ್ರೀಯ ಸೇನಾ ದಿನಾಚರಣೆ ಅಂಗವಾಗಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಬ್ಲಡ್ ಆನ್ ಕಾಲ್ ಕ್ಲಬ್ ಹಾಗೂ ಜೀವಧಾರ ರಕ್ತನಿಧಿ ಕೇಂದ್ರ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು
ಆಯೋಜಿಸಲಾಗಿತ್ತು.
90 ಯೂನಿಟ್ ಯುವಕ ಯುವತಿಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.
ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಜಾವಗಲ್ ಅವರು, ನಾವು ಹಣ ಗಳಿಸಿ ಉಳಿತಾಯ ಮಾಡುವ ಭರದಲ್ಲಿ ಆರೋಗ್ಯವನ್ನ ಕಳೆದುಕೊಳ್ಳಬಾರದು, ರಕ್ತಕ್ಕೆ ಪರ್ಯಾಯ ರಕ್ತವೇ ಆಗಿರುತ್ತದೆ ಎಂದು ಹೇಳಿದರು.
ರಕ್ತದಾನ ಅತ್ಯುತ್ತಮವಾದ ಕಾರ್ಯ, ರಕ್ತದಾನ ಶಿಬಿರಗಳನ್ನು ಯುವಪೀಳಿಗೆ ಹೆಚ್ಚಾಗಿ ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ನಮಗೆ ನಮ್ಮ ಕುಟುಂಬಗಳಿಗೆ ಅನಿವಾರ್ಯವಾದಾಗ ಮಾತ್ರ ರಕ್ತದಾನ ಮಾಡಬಾರದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕು
ಮೈಸೂರಿನಲ್ಲಿ ಸ್ವಚ್ಛ ಭಾರತ ಪರಿಸರ ಜಲ ಸಂರಕ್ಷಣೆ ಅಭಿಯಾನಕ್ಕೆ ಕೈಜೋಡಿಸುತ್ತೇನೆ ನಾನು ಮೈಸೂರಿನವನಾಗಿ ನನ್ನ ಸಾಮಾಜಿಕ ಕರ್ತವ್ಯ ನಿರ್ವಹಿಸುವ ಖುಷಿಯಿದೆ ಎಂದು ಜಾವಗಲ್ ಶ್ರೀನಾಥ್ ಹೇಳಿದರು.
ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ ರಕ್ತದಾನದ ಅರಿವು ಮೂಡಿಸುವಲ್ಲಿ ಶಿಕ್ಷಣ ಇಲಾಖೆ ಶಾಲಾ ಕಾಲೇಜುಗಳಲ್ಲಿ ಯೋಜನೆ ಹಮ್ಮಿಕೊಳ್ಳಲು ಮುಂದಾಗಬೇಕು ಎಂದು ಮನವಿ ಮಾಡಿದರು.
ದೇಶದ ಗಡಿ ಕಾಯುವ ಸೈನಿಕರ ಕೊಡುಗೆ ಎಂದಿಗೂ ಅಪಾರ. ನಾವು ಇಂದು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ನಮ್ಮ ಸೈನಿಕರು ಕಾರಣ ಎಂದು ಹೇಳಿದರು.
ನಮ್ಮ ದೇಶದ ಸೇನಾಪಡೆ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ನಮ್ಮ ದೇಶವನ್ನು ರಕ್ಷಿಸಿದೆ. ಹಲವಾರು ಪ್ರಕೃತಿ ವಿಕೋಪಗಳಲ್ಲಿ ಜನರನ್ನು ಕಾಪಾಡಿದೆ. ಇಂಥ ಸೇನೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ನಮ್ಮ ಸೈನಿಕರನ್ನ ಗೌರವಿಸುವ ಸಲುವಾಗಿ ಸೈನ್ಯ ದಿನವಾಗಿ ಆಚರಿಸುತ್ತೇವೆ ಎಂದು ತಿಳಿಸಿದರು.
ಇದೇ ವೇಳೆ ಮಂಡಿ ಪೊಲೀಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ರಘು ,ಆರಕ್ಷಕ ನಿರೀಕ್ಷಕರಾದ ವಿಶ್ವನಾಥ್ ರವರು ಸಹ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರು.
ನೌಕಾಪಡೆಯ ನಿವೃತ್ತ ಸೇನಾಧಿಕಾರಿ ರವಿಕುಮಾರ್ ,ಎ ಎಸ್ ಐ ನಟರಾಜ್, ಮುತ್ತಣ್ಣ ,ಬ್ಲಡ್ ಆನ್ ಕಾಲ್ ಕ್ಲಬ್ ಸಂಸ್ಥಾಪಕರಾದ ದೇವೇಂದರ್ ಪರಿಹಾರಿಯಾ,ಆನಂದ್ ಮಾಂಡೋತ್, ಸದಸ್ಯರಾದ ಸೌಮ್ಯಾ .ಆರ್, ಆದಿತ್ಯ ಎ.ಜಿ ,ಮಾಲಿನಿ ಪಾಲಾಕ್ಷ ,ವೈದ್ಯರಾದ ಮಮತಾ ,ಭಾರತಿ ,ಜಯಂತ್, ಶಾರದ ,ಹಾಗೂ ಇನ್ನಿತರರು ಹಾಜರಿದ್ದರು.

