ಹಿಜಬ್ ಧರಿಸಲು ಅವಕಾಶ ಕೋರಿಕೆ: ಪ್ರಕರಣ ಛೀಫ್ ಜಸ್ಟಿಸ್ ಅಂಗಳಕ್ಕೆ

ಬೆಂಗಳೂರು: ಹಿಜಬ್ ಧರಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬುಧವಾರ ಕೂಡಾ ಮುಂದುವರಿಯಿತು.

ಸಧ್ಯಕ್ಕೆ ಈ ಪ್ರಕರಣ ಮುಖ್ಯ ನ್ಯಾಯ ಮೂರ್ತಿಗಳ ಅಂಗಳಕ್ಕೆ ಬಿದ್ದಿದೆ.

ಮೊದಲು ಅರ್ಜಿದಾರರ ಪರ ವಕೀಲ ಸಂಜಯ್ ಹೆಗಡೆ ವಾದ ಮಂಡಿಸಿ ಮೊದಲು ಪರಿಸ್ಥಿತಿ ಶಾಂತವಾಗಲಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುವಂತಾಗಲಿ ಎಂದು ಕೋರಿದರು.

ಈ ಸಂದರ್ಭದಲ್ಲಿ ನ್ಯಾಯಾಧೀಶರು ಈ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವ ಇಚ್ಚೆ ವ್ಯಕ್ತಪಡಿಸಿದರು.

ಆಗ ಅರ್ಜಿದಾರರ ಪರ ವಕೀಲ ದೇವದತ್ತ ಕಾಮತ್ ಮಾತನಾಡಿ ನಮಗೆ ನ್ಯಾಯಾಧೀಶರ ಮೇಲೆ ಸಂಪೂರ್ಣ ನಂಬಿಕೆ ಇದೆ,ಆದ್ದರಿಂದ ನೀವೆ ಇದನ್ನ ಇತ್ಯರ್ಥ ಪಡಿಸಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಇದು ನ್ಯಾಯಾಂಗದ ವಿವೇಚನೆಗೆ ಬಿಟ್ಟಿದ್ದು ಎಂದರು.

ಈ ವೇಳೆ ಅರ್ಜಿದಾರರ ಪರ ಮತ್ತೊಬ್ಬ ವಕೀಲ ಮೊಹಮ್ಮದ್ ತಾಹಿರ್ ವಾದ ಮಂಡಿಸಿ ಎರಡು ತಿಂಗಳು ಹಿಜಬ್ ಧರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ವೇಳೆ ಪ್ರಭುಲಿಂಗ ನಾವಡಗಿ ಯಾವುದೇ‌ ಕಾರಣಕ್ಕೂ ಮದ್ಯಂತರ ಆದೇಶ ನೀಡಬಾರದು, ಒಂದು ವೇಳೆ ಇದಕ್ಕೆ ಅವಕಾಶ ಕೊಟ್ಟರೆ ಅರ್ಜಿದಾರರ ಪರ ತೀರ್ಪು ಬಂದಂತಾಗುತ್ತದೆ ಎಂದು ಗಮನ ಸೆಳೆದರು.

ನಂತರ ಕಾಲೇಜು ಮ್ಯಾನೇಜ್ ಮೆಂಟ್ ಪರ ವಕೀಲ‌ ಸಜನ್‌ ಪೂವಯ್ಯ ವಾದ ಮಂಡಿಸಿ, ಅರ್ಜಿದಾರರ ವಾದದಲ್ಲಿ ಹುರುಳಿಲ್ಲ, ನಾವು ಎಲ್ಲರನ್ನ ಕೇಳಿಯೇ ನಿರ್ಣಯ ತೆಗೆದುಕೊಂಡಿದ್ದೇವೆ. ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿನಿಯರು ಮೊದಲು ಸಮವಸ್ತ್ರ ಧರಿಸಿ ಬಂದಿದ್ದಾರೆ. ಈಗ ತಕರಾರು ತೆಗೆದಿದ್ದಾರೆ ಎಂದು ನ್ಯಾಯಾಧೀಶರ ಗಮನ ಸೆಳೆದರು.

ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಧೀಶರಾದ ಕೃಷ್ಣ ಎಸ್.ದೀಕ್ಷಿತ್ ಅವರು ಈ ಪ್ರಕರಣವನ್ನು ಮುಖ್ಯ ನ್ಯಾಯ ಮೂರ್ತಿಗಳಿಗೆ ವರ್ಗಾಯಿಸುವುದಾಗಿ ಪ್ರಕಟಿಸಿದರು.

ಇದರಲ್ಲಿ‌ ಬಹಳಷ್ಟು ಸೂಕ್ಷ್ಮ ವಿಚಾರಗಳಿವೆ ವಿಸ್ತೃತ ಪೀಠವನ್ನು ರಚನೆ ಮಾಡುವ ಬಗ್ಗೆ ಮುಖ್ಯ ನ್ಯಾಯ ಮೂರ್ತಿಗಳು ನಿರ್ಧರಿಸುತ್ತಾರೆ, ಪ್ರಕರಣವನ್ನು ಅವರಿಗೆ ವರ್ಗಾಯಿಸುವುದಾಗಿ ಕೃಷ್ಣ ದೀಕ್ಷಿತ್ ತಿಳಿಸಿದರು.