ಮೈಸೂರು: ಭಾರತ ದೇಶದ ಧ್ವಜದ ಮಹತ್ವ ಮತ್ತು ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಲು ಹೊರಟಿರುವ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಬೇಕೆಂದು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.
ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು ಭಾರತೀಯ ರಾಷ್ಟ್ರೀಯ ತ್ರಿವರ್ಣ ಧ್ವಜವನ್ನು1947 ರ ಜುಲೈ 22ರಂದು ಡಾ.ಬಿ. ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯ ರಚನಾ ಸಭೆಯಲ್ಲಿ ಅನುಮೋದಿಸಲಾಯಿತು ಎಂದಿದ್ದಾರೆ.
ನಮ್ಮ ತ್ರಿವರ್ಣ ಧ್ವಜವು ಮೇಲೆ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ, ಕೊನೆಯಲ್ಲಿ ಹಸಿರು ಬಣ್ಣದ ಪಟ್ಟಿಗಳಿಂದ ಕೂಡಿದೆ. ಬಾವುಟದ ಮಧ್ಯದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವಿದೆ.
ದೇಶದ ವೈವಿಧ್ಯಮಯ ಜಾತಿ, ಮತ, ಪಂಗಡ ಮತ್ತು ಸಂಸ್ಕೃತಿಯ ಜನರನ್ನು ಒಂದೇ ಧ್ವಜದಡಿ ನಿಲ್ಲಿಸಿ ದೇಶದ ಏಕತೆಯನ್ನು ಸಾರುವ ಅಮರತ್ವದ ಸಂಕೇತವೇ ನಮ್ಮ ರಾಷ್ಟ್ರಧ್ವಜ ಎಂದು ತಿಳಿಸಿದ್ದಾರೆ.
ನಮ್ಮ ಸ್ವತಂತ್ರ್ಯ ದೇಶದ ಸಮಗ್ರತೆಯ ಮತ್ತು ಐಕ್ಯತೆಯ ಸಂಕೇತವಾಗಿರುವ ರಾಷ್ಟ್ರ ಧ್ವಜದ ಅವಹೇಳನ, ಅಗೌರವ ಮತ್ತು ಅಪನಂಬಿಕೆಯು ದೇಶ ದ್ರೋಹವಾಗಿರುತ್ತದೆ.
ನಮ್ಮ ದೇಶದ ಧ್ವಜದ ಮಹತ್ವ ಮತ್ತು ಅದರ ಇತಿಹಾಸ ತಿಳಿಯದೇ ಕೇಸರಿ ಧ್ವಜವನ್ನೇ ರಾಷ್ಟ್ರ ಧ್ವಜ ಮಾಡಲು ಹೊರಟಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಪೊಲೀಸರು ದೇಶದ್ರೋಹದ ಪ್ರಕರಣ ದಾಖಲಿಸಬೇಕೆಂದು ಮಹದೇವಪ್ಪ ಆಗ್ರಹಿಸಿದ್ದಾರೆ.
ಸಂವಿಧಾನ ಬದ್ಧವಾದ ರಾಷ್ಟ್ರೀಯ ಚಿಹ್ನೆಗಳನ್ನು ಅಗೌರವದಿಂದ ಕಾಣುತ್ತಿರುವುದಕ್ಕೆ ವಿಧಾನಸಭಾಧ್ಯಕ್ಷರು ಕೂಡಾ ಈಶ್ವರಪ್ಪ ಮೇಲೆ ಸದನದ ಒಳಗೆ ಕಠಿಣ ಕ್ರಮ ಜರುಗಿಸಲಿ ಎಂದು ಹೇಳಿದ್ದಾರೆ.

