ಮಧ್ವಾಚಾರ್ಯರು ಭಕ್ತಿ ಮಾರ್ಗದ ಪ್ರವರ್ತಕರು

ಮೈಸೂರು:ಮಧ್ವಾಚಾರ್ಯರು ಭಕ್ತಿ ಮಾರ್ಗದ ಪ್ರವರ್ತಕರು ದ್ವೈತ ಸಿದ್ದಾಂತದ ಪ್ರತಿಪಾದಕರು ಎಂದು ಹಿರಿಯ ಸಮಾಜ ಸೇವಕ ಡಾ. ಕೆ ರಘುರಾಂ ವಾಜಪೇಯಿ ಹೇಳಿದರು.

ಮೈಸೂರಿನ ಅರವಿಂದನಗರ ಕಂದಾಯ ಬಡಾವಣೆಯಲ್ಲಿರುವ ಸಿದ್ದಿವಿನಾಯಕ ಗಣಪತಿ ದೇವಸ್ಥಾನದಲ್ಲಿ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಶ್ರೀಮಧ್ವನವಮಿ ಅಂಗವಾಗಿ ಹಮ್ಮಿಕೊಂಡಿದ್ದ ಸನಾತನ ಧರ್ಮದಲ್ಲಿ ಮಧ್ವ ಪರಂಪರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಧ್ವಾಚಾರ್ಯರು ಉಡುಪಿ ಜಿಲ್ಲೆಯವರು ಇಂದಿಗೂ ಮಧ್ವಪರಂಪರೆ ಪರಿಪಾಲಿಸುವಲ್ಲಿ ಪೇಜಾವರ ಮಠ, ಉಡುಪಿ ಅಷ್ಟ ಮಠಗಳು, ವ್ಯಾಸರಾಜ ಮಠ ಹಾಗೂ ಮಂತ್ರಾಲಯಗಳು ಮುಂದಿವೆ ಎಂದರು.

ಕೇವಲ ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗದೇ ಅನ್ನದಾಸೋಹ ಯೋಜನೆ ವೈದ್ಯಕೀಯ ಸೇವಾ ಕೇಂದ್ರ ವಿದ್ಯಾಮಂದಿರಗಳನ್ನ ನಿರ್ಮಿಸಿ ಸಾವಿರಾರು ಭಕ್ತರ ಜೀವನಕ್ಕೆ ಈ ಎಲ್ಲಾ ಮಠಗಳು ದಾರಿಯಾಗಿವೆ ಎಂದು ಹೇಳಿದರು.

ನಂತರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ವೈ.ಡಿ. ರಾಜಣ್ಣ  ಮಾತನಾಡಿ ಸ್ವತಂತ್ರಪೂರ್ವ ಭಾರತಕ್ಕೆ ಶಂಕರ, ರಾಮಾನುಜ, ಮಧ್ವಚಾರ್ಯರ ಕೊಡುಗೆ ಅಪಾರ ಎಂದು ಸ್ಮರಿಸಿದರು.

ಅದ್ವೈತ, ದ್ವೈತ,  ವಿಶಿಷ್ಟಾದ್ವೈತ ಸಿದ್ಧಾಂತವನ್ನ ಮೂವರು ಆಚಾರ್ಯರು ಪ್ರತಿಪಾದಿಸಿ ಧಾರ್ಮಿಕತೆಯೊಂದಿಗೆ ಸಂಸ್ಕೃತಿ ಸಂಸ್ಕಾರ ಶಿಕ್ಷಣ ವಿಜ್ಞಾನ ವಿಷಯವನ್ನ  ತಿಳಿಸಿದ್ದಾರೆ ಎಂದು ತಿಳಿಸಿದರು.

ಮಧ್ವಾಚಾರ್ಯರು ನಮ್ಮ ಕನ್ನಡಿಗರು ಎನ್ನುವುದು ಸಂತಸದ ವಿಚಾರ, ಇಂದಿನ  ತಾಂತ್ರಿಕ ಯುಗದಲ್ಲಿ ನೆಮ್ಮದಿಯ ಜೀವನಕ್ಕೆ ಧಾರ್ಮಿಕತೆ ಅವಶ್ಯ.ಮಾನವನ ಸುಖ, ಶಾಂತಿ, ನೆಮ್ಮದಿಯ ಜೀವನಕ್ಕೆ ದೇವಾಲಯಗಳು, ಧಾರ್ಮಿಕ ಆಚರಣೆಗಳು ವೈಜ್ಞಾನಿಕವಾಗಿ ಸಹಕಾರಿಯಾಗಿವೆ ಎಂದು ಅವರು ಹೇಳಿದರು.

ನಗರಪಾಲಿಕೆ ಸದಸ್ಯೆ ಗೀತಾ ಯೋಗಾನಂದ್, ರಾಷ್ಟ್ರೀಯ ಹಿಂದೂ ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ, ಬಿಜೆಪಿ ಮುಖಂಡ ಯೋಗಾನಂದ್,ನಿತಿನ್, ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಕಾರ್ಯದರ್ಶಿ ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್,ತೇಜಸ್,ಪ್ರದೀಪ್ ಶಶಾಂಕ್, ವಿನಯ್,ಪುರೋಹಿತ ಪಣೀಶ್,ಮತ್ತಿತರರು ಪಾಲ್ಗೊಂಡಿದ್ದರು.