ಮೈಸೂರು:ಅಯೋಧ್ಯೆಗೆ ಸಂಚರಿಸುತ್ತಿರುವ ಶ್ರೀರಾಮಾಮೃತ ತರಂಗಿಣಿ 16 ನದಿಗಳ ಪವಿತ್ರಗಂಗೆ, ಮೃತ್ಯುಕೆ ಮತ್ತು ರಾಮನಪಾದುಕೆ ಧಾರ್ಮಿಕ ಕಾರ್ಯಕ್ರಮಗಳ ಸಂಚಾರಕ್ಕೆ ಮೈಸೂರಿನ ಶಂಕರ ಮಠದ ಮುಂಭಾಗದಲ್ಲಿ ಶಾಸಕ ಎಸ್.ಎ ರಾಮದಾಸ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶಂಕರ ವಾಹಿನಿಯ ಸಂಪಾದಕ ಬಾಲಾಜಿ ಮಾತನಾಡಿ ದಕ್ಷುಣಾಮ್ನಾಯ ಶೃಂಗೇರಿ ಶಂಕರ ಮಠದ ಪೀಠಾಧಿಪತಿಗಳಾದ ಮಹಾಸನ್ನಿಧಾನಂ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳು ಮತ್ತು ಸನ್ನಿಧಾನಂ ಶ್ರೀ ವಿದುಶೇಖರ ಭಾರತಿತೀರ್ಥ ಮಹಾಸ್ವಾಮಿಗಳ ಅನುಗ್ರಹದೊಂದಿಗೆ ದೇಶದ ಎಲ್ಲೆಡೆ 1ಕೋಟಿ ಮನೆಗಳಿಗೆ ತೆರಳಿರುವ ಶ್ರೀರಾಮಾಮೃತ ತರಂಗಿಣಿ ಸಂಚಾರ ಮೈಸೂರಿಗೆ ಆಗಮಿಸಿರುವುದು ನಮ್ಮ ಪುಣ್ಯ ಎಂದರು.
ಶ್ರೀರಾಮ ಮಂದಿರಕ್ಕೆ ತೆರಳುವ 16 ನದಿಗಳ ಪವಿತ್ರಗಂಗೆ, ಮೃತ್ಯಕೆ ಮತ್ತು ಶ್ರೀರಾಮನ ಪಾದುಕೆಗೆ ಭಕ್ತರು ತಮ್ಮ ಮನೆ ಬಾಗಿಲ ಬಳಿಯೇ ಪ್ರಾರ್ಥನೆ, ಪೂಜೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಧಾರ್ಮಿಕ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಬಹುದಾಗಿದ್ದು ಹೆಚ್ಚಿನ ಮಾಹಿತಿಗಾಗಿ 9632200824 ಸಂಪರ್ಕಿಸಬಹುದು ಎಂದು ತಿಳಿಸಿದರು.
ಕರ್ನಾಟಕದ ಹಂಪಿಯ ಅಂಜನಾದ್ರಿ ಬೆಟ್ಟದಿಂದ ಪ್ರಾರಂಭವಾಗಿರುವ ಶ್ರೀರಾಮಾಮೃತ ತರಂಗಿಣಿ ಸಂಚಾರವು ಫೆ. 15ರಿಂದ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಲಿದೆ ಎಂದರು.
ಶಾಸಕರಾದ ಎಸ್. ಎ ರಾಮದಾಸ್ ಮಾತನಾಡಿ ಶೃಂಗೇರಿ ಗುರುಗಳ ಆಶೀರ್ವಾದದಿಂದ ಮೈಸೂರಿಗೆ ಬಂದಿರುವ ಶ್ರೀರಾಮಾಮೃತ ತರಂಗಿಣಿ ಕೃಷ್ಣರಾಜ ಕ್ಷೇತ್ರದ ಧಾರ್ಮಿಕ ಮಠಗಳು ದೇವಸ್ಥಾನ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ 10ಸಾವಿರ ಮನೆಗಳಿಗೆ ತಲುಪಿ ಒಂದು ಲಕ್ಷ ಭಕ್ತರಿಂದ ಪೂಜಾಕೈಂಕರ್ಯ ನೆರವೇರಿಸುವ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಮೈಸೂರಿನಲ್ಲಿ ಕೆಲವೇ ದಿನದಲ್ಲಿ ಸ್ಥಾಪಿತವಾಗಲಿರುವ ಶ್ರೀ ಶಂಕರಾಚಾರ್ಯರ ಉದ್ಯಾನ ಮತ್ತು ಶ್ರೀ ರಾಮಾನುಜರ ಉದ್ಯಾನದ ಬಳಿ ಶ್ರೀರಾಮಾಮೃತ ತರಂಗಿಣಿ ರಥವನ್ನು ಕರೆತಂದು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ವಿ ರಾಜೀವ್ ಮಾತನಾಡಿ ಮೈಸೂರು ನಗರದಲ್ಲಿ ಬಹುತೇಕ ಮಂದಿ ಆಧ್ಯಾತ್ಮಿಕ, ಧಾರ್ಮಿಕ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಶ್ರೀರಾಮಾಮೃತ ತರಂಗಿಣಿ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸುವ ಸೌಭಾಗ್ಯ ಸಿಕ್ಕಿದೆ, ನಮ್ಮ ಮೈಸೂರಿಗರು ಇದನ್ನು ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ, ಜಿಎಸ್‍ಎಸ್ ಫೌಂಡೇಶನ್ ಶ್ರೀಹರಿ, ಮಹರ್ಷಿ ಶಾಲೆಯ ಭವಾನಿ ಶಂಕರ್, ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್, ಶಂಕರ ಮಠದ ಧರ್ಮಾಧಿಕಾರಿ ರಾಮಚಂದ್ರ, ಬ್ರಾಹ್ಮಣ ಅಭಿವೃದ್ದಿ ಮಂಡಳಿ ನಿರ್ದೇಶಕ ಎಂ.ಆರ್ ಬಾಲಕೃಷ್ಣ, ಬಿಜೆಪಿ ಯುವ ಮುಖಂಡ ಕೆ.ಎಂ.ನಿಶಾಂತ್, ಭಜನಾ ಮಂಡಳಿ ಸುಬ್ಬರಾವ್, ಸಂತೋಷ್ ಶಂಭು, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ರಂಗನಾಥ್, ಮಧುಸೂದನ್, ಜ್ಯೋತಿ, ಪ್ರಶಾಂತ್, ವಾದಿರಾಜ್ ಬಲ್ಲಾಳ್, ರವಿ, ಇನ್ನಿತರರು ಇದ್ದರು.

