ಬೆಂಗಳೂರು: ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಬಂದಿದ್ದ ಸಾರ್ವಜನಿಕರಿಗೆ ಪ್ರವೇಶಿಸಲು ಅಡ್ಡಿಪಡಿಸಿದ ಪೊಲೀಸರನ್ನು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರ ನಿವಾಸದ ಬಳಿ ಬುಧವಾರ ಬೆಳಿಗ್ಗೆ ಕುಂದುಕೊರತೆಗಳನ್ನು ಹೇಳಿ ಪರಿಹಾರ ಪಡೆದುಕೊಳ್ಳಲು ಸಾರ್ವಜನಿಕರು ಆಗಮಿಸಿದ್ದರು.
ಆದರೆ ಭದ್ರತಾ ದೃಷ್ಟಿಯಿಂದ ಪೊಲೀಸರು ಸಾರ್ವಜನಿಕರಿಗೆ ಮುಖ್ಯ ಮಂತ್ರಿಯನ್ನು ಭೇಟಿ ಮಾಡಲು ಅವಕಾಶ ಕೊಡಲಿಲ್ಲ.
ಇದರಿಂದ ಕುಪಿತರಾದ ಜನರು ಮುಖ್ಯಮಂತ್ರಿಗಳು ಬರುತ್ತಿದ್ದಂತೆ ಪೊಲೀಸರ ವಿರುದ್ಧ ದೂರು ನೀಡಿದರು.
ದೂರು ಕೇಳಿದ ಕೂಡಲೆ ಕೆರಳಿ ಕೆಂಡವಾದ ಸಿಎಂ ಪೊಲೀಸರ ಮೇಲೆ ಗರಂ ಆಗಿ, ರೀ ಯಾಕ್ರೀ ಅವರನ್ನು ಒಳಗೆ ಬಿಡಲಿಲ್ಲ ಎಂದು ಗುಡುಗಿದರು.
ನನ್ನನ್ನು ಭೇಟಿ ಮಾಡಲು ಬಂದವರನ್ನು ಭದ್ರತಾ ನೆಪವೊಡ್ಡಿ ಅಡ್ಡಿಪಡಿಸುವುದು ಸರಿಯಲ್ಲ. ಅವರು ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಬರುತ್ತಾರೆ. ನೀವು ಬಿಡದಿದ್ದರೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಈ ರೀತಿ ಪದೇ ಪದೇ ದೂರು ಬಂದರೆ ನಾನು ಸಹಿಸುವುದಿಲ್ಲ. ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೊಲೀಸರಿಗೆ ಸಿಎಂ ಎಚ್ಚರಿಕೆ ನೀಡಿದರು.

