ಬೆಂಗಳೂರು: ಕಮಿಷನ್ ದಂಧೆಯಿಂದ ಬೇಸತ್ತು ಮದ್ಯ ಮಾರಾಟಗಾರರ ಸಂಘ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬೆನ್ನಲ್ಲೇ ಈಗ ಗುತ್ತಿಗೆದಾರರ ಸಂಘ ಮತ್ತೆ ಸಿಡಿದೆದ್ದಿದೆ.
ಗುತ್ತಿಗೆದಾರರ ಸಂಘ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದು ಮಾರ್ಚ್ 5 ರೊಳಗೆ ಬಾಕಿ ಇರುವ 34,370 ಕೋಟಿ ರೂ ಬಿಲ್ ಪಾವತಿ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಈ ಭ್ರಷ್ಟ ಸರ್ಕಾರಕ್ಕೆ ಕಿಂಚಿತ್ತಾದರೂ ನಾಚಿಕೆ, ಮಾನ, ಮರ್ಯಾದೆ ಇದ್ದರೆ, ಈ ಕೂಡಲೇ ವಿಧಾನಸಭೆ ವಿಸರ್ಜನೆ ಮಾಡಿ ಚುನಾವಣೆಗೆ ಹೋಗಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಬಯಲಿಗೆ ಬಂದ ಗೃಹಲಕ್ಷ್ಮಿ ಹಗರಣಕ್ಕೆ ಇನ್ನೂ ಉತ್ತರ ಬಂದಿಲ್ಲ.
2025ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಪಾವತಿ ಆಗಬೇಕಾಗಿದ್ದ 5,000 ಕೋಟಿ ಗೃಹಲಕ್ಷ್ಮಿ ಹಣ ಏನಾಯ್ತು ಯಾವಾಗ ಬಿಡುಗಡೆ ಆಗಲಿದೆ ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಗದಿರುವಾಗಲೇ ಈಗ ಅನ್ನಭಾಗ್ಯದ ಹಣದಲ್ಲೂ ಭ್ರಷ್ಟಾಚಾರ ನಡೆದಿರುವ ವಾಸನೆ ಬರುತ್ತಿದೆ ಎಂದು ಟ್ವೀಟ್ ಮಾಡಿ ಅಶೋಕ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನವರೇ, ಕಳೆದ ವರ್ಷ ಜನವರಿಯಲ್ಲಿ ಅಕ್ಕಿಯೂ ಕೊಟ್ಟಿಲ್ಲ, ಅಕ್ಕಿಗೆ ಮೀಸಲಿಟ್ಟಿದ್ದ 657 ಕೋಟಿ ಹಣದ ಲೆಕ್ಕವೂ ಸಿಕ್ಕುತ್ತಿಲ್ಲ,ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ನಿಮ್ಮ ಭ್ರಷ್ಟ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯದ ಇಲಾಖೆಯೇ ಇಲ್ಲ, ಲೂಟಿ ಹೊಡೆಯದ ಸಚಿವರೂ ಇಲ್ಲ ಎಂದು ಅಶೋಕ್ ತೀವ್ರವಾಗಿ ಟೀಕಾಪ್ರಹಾರ ಮಾಡಿದ್ದಾರೆ.

