ವಿಮಾನ ಪತನ:ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ದುರಂತ ಸಾವು

ಮುಂಬೈ: ಬಾರಾಮತಿ ವಿಮಾನ ನಿಲ್ದಾಣದ ಸಮೀಪ ಬುಧವಾರ ಬೆಳಿಗ್ಗೆ ವಿಮಾನ ಪತನಗೊಂಡಿದ್ದು, ಎನ್‌ಸಿಪಿ ನಾಯಕರೂ,ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟಿದ್ದಾರೆ.

ಈ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸೇರಿ ದಾರುಣವಾಗಿ ಮೃತಪಟ್ಟಿದ್ದಾರೆ ಅಲ್ಲದೆ ಅವರೊಂದಿಗೆ ಇದ್ದ ಆರು ಮಂದಿಯೂ ಮೃತಪಟ್ಟಿದ್ದಾರೆ ಎಂದು ಗೊತ್ತಾಗಿದೆ.

ಬಾರಾಮತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ತೆರಳುತ್ತಿದ್ದಾಗ ವಿಮಾನ ಲ್ಯಾಂಡಿಂಗ್ ವೇಳೆ ಅಪಘಾತವಾಗಿದೆ.

ಅಜಿತ್ ಪವಾರ್ ಅವರು 1959ರ ಜುಲೈ 22ರಂದು ಅಹ್ಮದ್ ನಗರದ ದಿಯೋಲಾಲಿಯಲ್ಲಿ ಜನಿಸಿದರು. 1982ರಲ್ಲಿ ರಾಜಕೀಯ ಪ್ರವೇಶಿಸಿದ ಅವರು, ಪುಣೆ ಜಿಲ್ಲಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ16 ವರ್ಷ ಸೇವೆ ಸಲ್ಲಿಸಿದರು. 1991ರಲ್ಲಿ ಬಾರಾಮತಿಯಿಂದ ಲೋಕಸಭೆಗೆ ಆಯ್ಕೆಯಾದ ಅವರು, ನಂತರ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ 7 ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು.

ಅವರು ಕೃಷಿ, ವಿದ್ಯುತ್, ನೀರಾವರಿ, ಗ್ರಾಮೀಣ ಅಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳ ರಾಜ್ಯ ಸಚಿವರಾಗಿ, ಸಂಪುಟ ದರ್ಜೆ ಸಚಿವರಾಗಿ ಹಾಗೂ ಮಹಾರಾಷ್ಟ್ರದ 6 ಅವಧಿಗೆ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಬಡವರ ಮತ್ತು ರೈತರ ಧ್ವನಿಯಾಗಿ, ಅಜಿತ್ ದಾದಾ ಎಂದೇ ಖ್ಯಾತರಾಗಿದ್ದ ಅಜಿತ್ ಪವಾರ್, ನೇರ, ನಿಷ್ಠುರ ಮತ್ತು ದಿಟ್ಟ ರಾಜಕಾರಣಿಯಾಗಿದ್ದರು.

ಅಜಿತ್ ಪವಾರ್ ನಿಧನದಿಂದ ಮಹಾರಾಷ್ಟ್ರ ರಾಜಕಾರಣಕ್ಕೆ ದೊಡ್ಡ ನಷ್ಟವಾಗಿದೆ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಕರ್ನಾಟಕ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಪ್ರತಿ ಪಕ್ಷದ ನಾಯಕ ಆರ್ ಅಶೋಕ್ ಸೇರಿದಂತೆ ಎಲ್ಲ ಶಾಸಕರು ಅಜಿತ್ ಪವಾರ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಕಂಬನಿ ಮಿಡಿದಿದ್ದಾರೆ.