ಬೆಂಗಳೂರು: ರಾಜ್ಯದಲ್ಲಿರುವ ಅಷ್ಟೂ ಗ್ರಾಮ ಪಂಚಾಯ್ತಿಗಳಿಗೆ ಮಹಾತ್ಮಗಾಂಧಿ ಹೆಸರು ಇಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ಘೋಷಣೆ ಮಾಡಿದರು.
ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಮನರೇಗಾ ಬಚಾವೋ ಆಂದೋಲನದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ‘ಮನರೇಗಾ ಬಚಾವ್ ಸಂಗ್ರಾಮ್ ಅಂಗವಾಗಿ ಬೃಹತ್ ಪ್ರತಿಭಟನೆ ಹಾಗೂ ರಾಜ್ ಭವನ ಚಲೋ ಕಾರ್ಯಕ್ರಮದಲ್ಲಿ ಪಕ್ಷದ ವರಿಷ್ಠರು, ಮುಖಂಡರು, ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮಹಾತ್ಮಗಾಂಧಿ ಹೆಸರು ಕೇಳಿದರೆ ಬಿಜೆಪಿಗರಿಗೆ ಆಗಲ್ಲ, ದುರುದ್ದೇಶದಿಂದ ಮನ್ ರೇಗಾ ಹೆಸರು ಬದಲಾವಣೆ ಮಾಡಿ ವಿಬಿ ಜೀ ರಾಮ್ ಜೀ ಎಂಬುದಾಗಿ ಜಾರಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಮನ್ ರೇಗಾ ಯೋಜನೆಯಲ್ಲಿ ರಾಮ ಅನ್ನೋ ಹೆಸರು ಬರುವ ರೀತಿ ಯೋಜನೆ ಮಾಡಿದ್ದಾರೆ. ದಶರಥ ರಾಮ ಇಲ್ಲ ಕೌಶಲ್ಯ ರಾಮ ಇಲ್ಲ ಸೀತಾ ರಾಮ ಸಹ ಇಲ್ಲ. ಈ ಕಾಯ್ದೆಯಲ್ಲಿ ರಾಮ ಇಲ್ಲ, ಬಡವರು ದಲಿತರು, ರೈತರ ಬಗ್ಗೆ ಚಿಂತಿಸುವುದು ಕಾಂಗ್ರೆಸ್ ಮಾತ್ರ, ಬಡವರ ಬಗ್ಗೆ ಮಾತಾಡುವುದು ಕಾಂಗ್ರೆಸ್ ಮಾತ್ರ ಎಂದು ಕಡಕ್ಕಾಗಿ ಸಿದ್ದು ಹೇಳಿದರು.
ಆರ್ ಎಸ್ ಎಸ್ ನವರಿಗೆ ಬಡವರು ಮುಖ್ಯವಾಹಿನಿಗೆ ಬರುವುದು ಬೇಕಾಗಿಲ್ಲ ಬಡವರು ಬಡವರಾಗಿಯೇ ಉಳಿದು ಸದಾಕಾಲ ಸೇವಕರಾಗಿಯೇ ಇರಬೇಕು ಎನ್ನುವುದು ಬಿಜೆಪಿಯವರ ಸಿದ್ಧಾಂತ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.
ಬಿಜೆಪಿ ಬಡವರ ಪರವಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಗೊಳಿಸುತ್ತಿದೆ ಎಂದು ಮುಖ್ಯ ಮಂತ್ರಿಗಳು ಆಕ್ರೋಶ ವ್ಯಕ್ತಪಡಿಸಿದರು.
ನರೇಗಾ ಯೋಜನೆಯ ಪುನರ್ ಸ್ಥಾಪನೆ ಹಾಗೂ ವಿಬಿ ರಾಮ್ ಜಿ ಯ ರದ್ದತಿಯನ್ನು ಒತ್ತಾಯಿಸಿ, ರಾಜಭವನಕ್ಕೆ ಮನವಿಯನ್ನು ತಲುಪಿಸಲಾಗುವುದು ಎಂದು ಹೇಳಿದ ಸಿದ್ದರಾಮಯ್ಯ,ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಪಾದಯಾತ್ರೆ ಪ್ರಾರಂಭಿಸಲಾಗಿದೆ,ರಾಜ್ಯದ ಪ್ರತಿಯೊಬ್ಬರೂ ಕಾಂಗ್ರೆಸ್ ನ ಈ ಉದ್ದೇಶಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಬಜೆಟ್ ಘೋಷಣೆಯಲ್ಲಿ 6,000 ಗ್ರಾಮ ಪಂಚಾಯತಿಗಳ ಕಚೇರಿಗೂ ಮಹಾತ್ಮ ಗಾಂಧಿಯವರ ಹೆಸರನ್ನು ಇಡುವ ಬಗ್ಗೆ ಘೋಷಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಪ್ರಕಟಿಸಿದರು.
ಗ್ರಾಮೀಣ ಆರ್ಥಿಕತೆಗೆ ಬಲ ತುಂಬಿ, ಆ ಮೂಲಕ ಭಾರತವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಆಶಯವಾಗಿತ್ತು. ಈ ಚಿಂತನೆಯ ಮೇಲೆ ಜೀವ ತಳೆದದ್ದೇ ಮನರೇಗಾ ಯೋಜನೆ. ಬಡಜನರಿಗೆ ಕೆಲಸವನ್ನು ಸಂವಿಧಾನಾತ್ಮಕ ಹಕ್ಕನ್ನಾಗಿಸಿ, ವರ್ಷದ ಯಾವುದೇ ದಿನಗಳಲ್ಲಿ, ಅವರು ವಾಸಿಸುವ ಸ್ಥಳದಲ್ಲೇ ಉದ್ಯೋಗ ಒದಗಿಸುವುದು ಮನರೇಗಾ ಯೋಜನೆಯ ಮೂಲ ಆಶಯ. ಪ್ರಧಾನಿ ನರೇಂದ್ರ ಅವರ ಬಿಜೆಪಿ ಸರ್ಕಾರ ಕೇವಲ ಮಹಾತ್ಮ ಗಾಂಧಿಯವರ ಹೆಸರಿನ ಯೋಜನೆ ರದ್ದು ಮಾಡಿರುವುದಲ್ಲ, ಬದಲಿಗೆ ಗ್ರಾಮೀಣ ಆರ್ಥಿಕತೆಯನ್ನೇ ಬುಡಮೇಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಅಂದು ನಾಥೂರಾಮ ಗೋಡ್ಸೆಯ ಗುಂಡೇಟಿಗೆ ಮಹಾತ್ಮ ಗಾಂಧಿ ಬಲಿಯಾದ ಬಳಿಕ ಹೇಗೆ ಮನೆ ಮನೆಗೆ ಗಾಂಧಿ ವಿಚಾರಧಾರೆಗಳು ಹೆಚ್ಚೆಚ್ಚು ತಲುಪಿತೋ, ಮುಂದೆಯೂ ಹಾಗೆಯೇ ಪ್ರತಿ ಗ್ರಾಮ ಪಂಚಾಯತಿಯಲ್ಲೂ ಗಾಂಧೀಜಿಯವರ ಹೆಸರು ರಾರಾಜಿಸಲಿದೆ. ಮುಂಬರುವ ಬಜೆಟ್‌ನಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಕಡಕ್ಕಾಗಿ ಹೇಳಿದರು.
ಅಳಿಸಿ ಹಾಕಲು ಗಾಂಧಿ ಎಂಬುದು ಬರಿ ಹೆಸರಲ್ಲ, ಅನ್ಯಾಯ – ಅಸತ್ಯಗಳ ವಿರುದ್ಧದ ಹೋರಾಟಕ್ಕೆ ಕೋಟ್ಯಂತರ ಭಾರತೀಯರಿಗೆ ಇಂದಿಗೂ ಪ್ರೇರಕ ಶಕ್ತಿಯಾಗಿದೆ, ಮುಂದೆಯೂ ಗಾಂಧಿಯೇ ಈ ದೇಶದ ಆದರ್ಶ ಮತ್ತು ಅಸ್ಮಿತೆ ಎಂದು ಸಿದ್ದು ಬಣ್ಣಿಸಿದರು.

