ಬೆಂಗಳೂರು: ಬೆಂಗಳೂರಿನ ಹೆಸರಾಂತ ಉದ್ಯಮಿ ಸಿ.ಜೆ ರಾಯ್ ಅವರು ತಾವೇ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಘಟನೆ ಸಂದರ್ಭದಲ್ಲಿ ಐಟಿ ಅಧಿಕಾರಿಗಳ ಜೊತೆ ಯಾರ‍್ಯಾರು ಇದ್ದರು ಎಂಬ ಬಗ್ಗೆಯೂ ತನಿಖೆ ಆಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇರಳ ಐಟಿ ಅಧಿಕಾರಿಗಳ ತಂಡ ಕಳೆದ ಮೂರು ದಿನಗಳಿಂದ ದಾಳಿ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಸಿ.ಜೆ ರಾಯ್ ಶೂಟ್ ಮಾಡಿಕೊಂಡುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಯಿಂದ 3:15 ರ ಸುಮಾರಿನಲ್ಲಿ ಘಟನೆ ನಡೆದಿದೆ ಎಂದು ತಿಳಿಸಿದರು.
ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕರು ಘಟನೆ ಸಂಬಂಧ ದೂರು ಕೊಟ್ಟಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯಬೇಕಿದೆ ಎಂದು ತಿಳಿಸಿದರು.
ಘಟನೆ ಬಳಿಕ ಮೃತದೇಹವನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಶೂಟ್ ಮಾಡಿಕೊಂಡ ಗನ್ ಯಾವುದು ಎಂಬ ಬಗ್ಗೆ ಸೋಕೋ ಮತ್ತು ಬ್ಯಾಲೆಸ್ಟಿಕ್ ಟೀಂ ನಿಂದ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಐಟಿ ಅಧಿಕಾರಿಗಳ ಜೊತೆ ಬೇರೆ ಯಾರಾದರು ಇದ್ದರೆ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಸೀಮಂತ್ ಕುಮಾರ್ ಹೇಳಿದರು.
ಸಿ.ಜೆ ರಾಯ್ ಅವರು ಕಾನ್ಫಿಡೆಂಟ್ ಗ್ರೂಪ್ ಎಂಬ ರಿಯಲ್ ಎಸ್ಟೇಟ್ ಕಂಪನಿಯನ್ನ ಹುಟ್ಟುಹಾಕಿದ್ದರು. ಪದೇ ಪದೇ ಐಟಿ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇಂದು ಕೂಡ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಪಿಸ್ತೂಲ್ನಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

