ಆಂತರಿಕ ಭದ್ರತೆ ಸವಾಲೊಡ್ಡುವವರಿಗೆ ಕಾನೂನು ಪಾಠ ಬೋಧಿಸಿ -ಆರಗ ಜ್ಞಾನೇಂದ್ರ

ಕಲಬುರಗಿ: ನೆಲದ ಕಾನೂನಿಗೆ ವಿರುದ್ಧವಾಗಿ ನಡೆಯುವ ಮತ್ತು ಆಂತರಿಕ ಭದ್ರತೆಗೆ ಸವಾಲೊಡ್ಡುವ ದುಷ್ಟಶಕ್ತಿಗಳಿಗೆ ಕಾನೂನು ಪಾಠ ಬೋಧಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸರಿಗೆ ಕರೆ ನೀಡಿದರು.

ಶನಿವಾರ ಕಲಬುರಗಿಯ ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ  ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದ ಸಮಾರಂಭದಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ರಾಜ್ಯದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದರ ಜೊತೆಗೆ ಸಾರ್ವಜನಿಕರ ಆಸ್ತಿ-ಪಾಸ್ತಿ, ಪ್ರಾಣಿ ಹಾನಿ ಸಂರಕ್ಷಣೆಯ ಮಹತ್ತರ ಜವಾಬ್ದಾರಿ ನಿಮ್ಮ ಮೇಲಿದೆ. ಯಾವುದೇ ಜಾತಿ-ಧರ್ಮಕ್ಕೆ ಸರ್ವರ ಕಲ್ಯಾಣಕ್ಕಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪೊಲೀಸ್ ಠಾಣೆಗೆ ಹೋದರೆ ಗೌರವ ಸಿಗುವುದಿಲ್ಲ ಎಂಬ ಸಾಮಾನ್ಯ ದೂರು ಸಾರ್ವಜನಿಕರದ್ದಾಗಿದೆ. ಠಾಣೆಗೆ ನ್ಯಾಯ ಕೇಳಿ ಬರುವ ಅಸಹಾಯಕರಿಗೆ, ಬಡವರಿಗೆ ನ್ಯಾಯ ಒದಗಿಸುವ, ಅಭಯ ನೀಡುವ ಮತ್ತು ಅವರನ್ನು ಗೌರಯುತವಾಗಿ ನಡೆದುಕೊಳ್ಳುವ ಕರ್ತವ್ಯ ನಿಮ್ಮದಾಗಿದೆ ಎಂದು ತಿಳಿಸಿದರು.

ಮುಂದಿನ 2022-23 ರಲ್ಲಿ 4,500 ಪೇದೆ, 300 ಪಿ.ಎಸ್.ಐ. ನೇಮಕಾತಿ ಮಾಡಿಕೊಳ್ಳಲು ಈಗಾಗಲೆ ಅನುಮತಿ ನೀಡಲಾಗಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು.

ರಾಜ್ಯದ ಶಾಂತಿ ಮತ್ತು ಸುವ್ಯಸ್ಥೆ ಕಾಪಾಡಲು ಹಗಲಿರುಳು ಕಾರ್ಯನಿರ್ವಹಿಸುವ ಪೊಲೀಸರ ಕಲ್ಯಾಣದ ಜವಾಬ್ದಾರಿ ಸರ್ಕಾರದ್ದಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸರ ಚಿಕಿತ್ಸೆಗಾಗಿ 111 ಕೋಟಿ ರೂ. ಮೀಸಲಿಡಲಾಗಿದೆ.

ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಮಾನಸಿಕ ಒತ್ತಡ ನಿವಾರಣೆಗೆ ಯೋಗ, ಧ್ಯಾನಕ್ಕೂ ಆದ್ಯತೆ ನೀಡಲಾಗಿದೆ ಎಂದರು.

ದೇಶದ ಗಡಿಯಲ್ಲಿ ಶತ್ರುವಿನ ವಿರುದ್ಧ ಹೋರಾಡುವ ಸೈನಿಕರ ಕೆಲಸ ಮಾಡು ಇಲ್ಲವೇ ಮಡಿಯಾದರೆ, ಒಳನಾಡಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಕಾರ್ಯ ವಿಭಿನ್ನವಾಗಿದೆ.

ಆಂತರಿಕವಾಗಿ ಸಮುದಾಯದೊಂದಿಗಿದ್ದು, ದುಷ್ಟಶಕ್ತಿಗಳ ವಿರುದ್ಧ ಲಾಠಿ ಬೀಸಬೇಕಿದೆ. ಇತ್ತೀಚೆಗೆ ಕೆಲ ಪ್ರಕರಣಗಳಲ್ಲಿ ಪೊಲೀಸ್ ಸಿಬ್ಬಂದಿಯ ನಡವಳಿಕೆಯಿಂದ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಗೃಹ ಸಚಿವರು ಬೇಸರ  ವ್ಯಕ್ತಪಡಿಸಿದರು.