ಮೈಸೂರು: ಎಲ್ಲಾ ಸಮಸ್ಯೆಗಳಿಗೂ ಶಿಕ್ಷಣವೇ ಪರಿಹಾರ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಹೊಯ್ಸಳ ಕರ್ನಾಟಕ ಸಂಘ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ದಿ.ಎ.ಆರ್.ಸುಂದರಮ್ಮ ಮಹಿಳಾ ವಿದ್ಯಾರ್ಥಿನಿಲಯದ ನವೀಕೃತ ಮತ್ತು ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಶಿಕ್ಷಣ ಪಡೆಯಲು ರಾಜರ ಕಾಲದಿಂದಲೂ ಸಹಕಾರ ನೀಡುವ ಆದರ್ಶ ನಡೆದುಕೊಂಡು ಬಂದಿದೆ ಅದನ್ನು ಹೊಯ್ಸಳ ಸಂಘ ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಎಲ್ಲೆಡೆ ದೇಗುಲಗಳನ್ನು ನಿರ್ಮಾಣ ಮಾಡುತ್ತೇವೆ. ಆದರೆ, ಮುಖ್ಯವಾಗಿ ಹಾಸ್ಟೆಲ್‌ಗಳನ್ನು ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಹೊಯ್ಸಳ ಕರ್ನಾಟಕ ಸಂಘ ಮಾದರಿಯಾಗಿದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಹಿರಿಯ ವಿಜ್ಞಾನಿಯಾದ ಡಾ.ಎಸ್.ಅಯ್ಯಪ್ಪನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಹೊಯ್ಸಳ ರತ್ನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಭಾರತದಲ್ಲಿ, ವಾಯುಮಾಲಿನ್ಯ, ಜೀವಜಲ, ಪ್ಲಾಸ್ಟಿಕ್, ಆಹಾರ ಪೋಲು ಸೇರಿದಂತೆ ಸಾಕಷ್ಟು ಸವಾಲುಗಳಿವೆ ಎಂದರು.
ಇವುಗಳನ್ನು ನಾವು ಸಮರ್ಥವಾಗಿ ಎದುರಿಸಬೇಕಾಗಿದೆ. ಹಾಗಾಗಿ ಯುವ ಪೀಳಿಗೆ ನಿರಂತರ ಕಲಿಕೆಯೊಂದಿಗೆ ಗಳಿಕೆ ಹಾಗೂ ಆಹಾರ, ನೀರು , ವಿದ್ಯುತ್ ಅನ್ನು ಉಳಿಕೆ ಮಾಡಬೇಕಿದೆ ಎಂದು ಕಿವಿಮಾತು ಹೇಳಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ಸಂಘದ ಕಾರ್ಯ ವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ರಾಜವಂಶಸ್ಥೆ ತ್ರಿಶಿಕಾಕುಮಾರಿ, ಹೊಯ್ಸಳ ಕರ್ನಾಟಕ ಸಂಘ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಕೆ.ಆರ್.ಶಿವಶಂಕರ್, ಹೊಯ್ಸಳ ಸಂಘದ ಅಧ್ಯಕ್ಷ ಪಿ.ವಿ.ಭಾರದ್ವಾಜ್, ಸಂಘದ ಪದಾಧಿಕಾರಿಗಳು, ಟ್ರಸ್ಟಿಗಳು ಹಾಗೂ ಗಣ್ಯರು, ದಾನಿಗಳು ಹಾಜರಿದ್ದರು.

