ಉಕ್ರೇನ್ ಗೆಲ್ಲಲು ಸಾಧ್ಯವಿಲ್ಲ: ಪುಟಿನ್ ಗೆ ಬಿಡೆನ್ ತಿರುಗೇಟು

ವಾಷಿಂಗ್ಟನ್: ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ ಮತ್ತು ರೊಮೇನಿಯಾದಂತಹ ರಷ್ಯಾದ ಗಡಿಯಲ್ಲಿ 12,000 ಸೈನಿಕರನ್ನು ಸ್ಥಳಾಂತರಿಸಿದ್ದೇವೆ ಎಚ್ಚರ ಇರಲಿ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರಷ್ಯಾ ಅಧ್ಯಕ್ಷರಿಗೆ ಸೂಚ್ಯವಾಗಿ ಹೇಳಿದ್ದಾರೆ.

ಏನೇ ಮಾಡಿದರೂ ನಿಮಗೆ ಉಕ್ರೇನ್‍‌‌  ಗೆಲ್ಲಲು ಸಾಧ್ಯವಿಲ್ಲ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‍ಗೆ ತಿರುಗೇಟು ನೀಡಿದ್ದಾರೆ.

ಸಂಸತನ್ನು ಉದ್ದೇಶಿಸಿ ಮಾತನಾಡಿರುವ ಅವರು, ನಾವು ಮೂರನೆ ವಿಶ್ವ ಯುದ್ಧಕ್ಕೆ ನಾಂದಿ ಹಾಡುವುದಿಲ್ಲ. ಆದರೆ, ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ತಡೆಯಲು ಮತ್ತು ನ್ಯಾಟೋ ದೇಶಗಳ ಭೂಮಿಯನ್ನು ರಕ್ಷಿಸಲು ನಾವು ಸಿದ್ಧ ಎಂದು ಪರೋಕ್ಷವಾಗಿ ಕಟುವಾಗಿ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಯೂರೋಪಿಯನ್ ರಾಷ್ಟ್ರಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುವುದನ್ನು ನಾವು ಸಹಿಸುವುದಿಲ್ಲ.

ಉಕ್ರೇನ್‍ ನ ಜನರು ಶೌರ್ಯ ಮತ್ತು ಸಾಹಸವನ್ನು ಪ್ರದರ್ಶಿಸಿ ತಮ್ಮ ನೆಲವನ್ನು ರಕ್ಷಿಸುತ್ತಿದ್ದಾರೆ. ನಾವು ಅವರಿಗೆ ರಕ್ಷಣೆ ನೀಡುವುದು ನಿರ್ಣಯಕವಾದ ವಿಷಯ ಎಂದು ಹೇಳಿದ್ದಾರೆ.

ನಮ್ಮ ಮಿತ್ರ ರಾಷ್ಟ್ರಗಳು ಹಾಗೂ ಐರೋಪ್ಯ ರಾಷ್ಟ್ರಗಳು ಜತೆಗೂಡಿ ಉಕ್ರೇನ್ ಪರ ನಿಲ್ಲುತ್ತೇವೆ. ನಮ್ಮ ಒಂದಿಂಚೂ ಭೂಮಿಯನ್ನು ಕಬಳಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

ರಷ್ಯಾ ಒಂದೊಮ್ಮೆ ದುಸ್ಸಾಹಸ ನಡೆಸಿದರೆ ಮೂರನೇ ವಿಶ್ವಯುದ್ಧ ನಡೆಯಬಹುದು. ನಾವು ಅದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದು ಬಿಡೆನ್ ಸ್ಪಷ್ಟಪಡಿಸಿದ್ದಾರೆ