ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಮತ್ತು ಬಿಜೆಪಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ. ನಾನು ಯಾವುದೇ ಕಾರಣಕ್ಕೂ ಸಂಪುಟ ಸೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ. ದೇಶದಲ್ಲಿ ಇಬ್ಬರು ಸಿದ್ದು ಇದ್ದಾರೆ. ಒಬ್ಬ ಸಿಧು ಪಂಜಾಬಿನಲ್ಲಿ ಕಾಂಗ್ರೆಸ್ ಹಾಳು ಮಾಡಿದ. ನಮ್ಮ ರಾಜ್ಯದಲ್ಲಿರುವ ಸಿದ್ದು ಸಹ ಕಾಂಗ್ರೆಸ್ ಅನ್ನು ಅವನತಿಗೆ ತರುತ್ತಾರೆ ಎಂದು ಶೆಟ್ಟರ್ ಭವಿಷ್ಯ ನುಡಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬೇರೆ ಬೇರೆ ಬಣ ಕಟ್ಟಿಕೊಂಡಿದ್ದಾರೆ. ಈಗಾಗಲೇ ಅವರಲ್ಲೇ ಗುಂಪುಗಾರಿಕೆ ಆರಂಭವಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಕ್ತವಾಗುತ್ತದೆ ಎಂದು ಮೋದಿಯವರು ಹೇಳುತ್ತಿದ್ದರು. ಈಗ ಹಾಗೆಯಯ ಆಗುತ್ತಿದೆ ಎಂದರು.
ರಾಜ್ಯದಲ್ಲಿ ಹಿಂದಿನ ಎಲ್ಲಾ ಸರ್ಕಾರಗಳು ಬಜೆಟ್ ಹಣವನ್ನು ಬಾಕಿ ಉಳಿಸಿಕೊಂಡಿವೆ. ಸಿದ್ದರಾಮಯ್ಯ ಅವರ ಇಂದಿರಾ ಕ್ಯಾಂಟೀನ್ ಹಣ ಸಾಕಷ್ಟು ಬಾಕಿ ಉಳಿದಿದೆ. ಅದರ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡಲಿ ಎಂದು ಆಗ್ರಹಿಸಿದರು.
ಮಹಾದಾಯಿ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಇವೆ. ಆ ಸಮಸ್ಯೆಗಳು ಬಗೆಹರಿದ ನಂತರ ಕಾಮಗಾರಿ ಆರಂಭವಾಗುತ್ತದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

