ಬೆಂಗಳೂರು: ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಎಸ್.ನಾರಾಯಣ್, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ತಿಮ್ಮಯ್ಯ ಪುರ್ಲೆ ಸೇರಿದಂತೆ ಅನೇಕಕರು ಕಾಂಗ್ರೆಸ್‍ಗೆ ಸೇರ್ಪಡೆಯಾದರು.
ಕೆಪಿಸಿಸಿ ಕಚೇರಿಯಲ್ಲಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖುದ್ದಾಗಿ ತಮ್ಮದೇ ಮೊಬೈಲ್‍ನಲ್ಲಿ ಎಸ್.ಆರ್.ನಾರಾಯಣ್ ಅವರಿಂದ ಸದಸ್ಯತ್ವ ನೋಂದಣಿ ಮಾಡಿಸಿ ಫೋಟೋ ತೆಗೆದು ವೆಬ್‍ಸೈಟ್‍ಗೆ ಅಪ್‍ಲೋಡ್ ಮಾಡಿದರು.
ಈ ಸಂದರ್ಭದಲ್ಲಿ ನಾರಾಯಣ್ ಕುಟುಂಬ ಸದಸ್ಯರು ಹಾಜರಿದ್ದರು.
ನೀವು ಕೂಡ ಸದಸ್ಯತ್ವ ನೋಂದಾಯಿಸಿ ಎಂದು ಅವರನ್ನು ಒತ್ತಾಯಿಸಿದರು. ನನ್ನ ಮೊಬೈಲ್‍ನಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯನವರ ಸದಸ್ಯತ್ವವನ್ನು ನೊಂದಣಿ ಮಾಡಿ ಅಭಿಯಾನಕ್ಕೆ ಚಾಲನೆ ಮಾಡಿದೆ. 3ನೇ ಸದಸ್ಯರನ್ನಾಗಿ ನಾರಾಯಣ್ ಅವರನ್ನು ನಾನೇ ಖುದ್ದಾಗಿ ನೋಂದಣಿ ಮಾಡಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಈ ವೇಳೆ ನಾರಾಯಣ್ ಮಾತನಾಡಿ ಚಿತ್ರರಂಗ ನಮಗೆ ಒಳ್ಳೆಯ ಸ್ಥಾನ, ಗೌರವ, ಯಶಸ್ಸು ಎಲ್ಲವನ್ನೂ ಕೊಟ್ಟಿದೆ. ನಿರ್ದೇಶಕನಾಗಿ, ನಿಮಾರ್ಪಕನಾಗಿ, ನಟನಾಗಿ, ಹಂಚಿಕೆದಾರನಾಗಿ, ಬರಹಗಾರನಾಗಿ, ಪ್ರದರ್ಶಕನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ ಎಂದು ಹೇಳಿದರು.
ಡಾ.ರಾಜ್‍ಕುಮಾರ್, ಡಾ.ವಿಷ್ಣುವರ್ಧನ್, ಡಾ.ಅಂಬರೀಶ್, ಡಾ.ಶಿವರಾಜ್‍ಕುಮಾರ್, ಡಾ.ಪುನೀತ್‍ರಾಜ್‍ಕುಮಾರ್ ಸೇರಿದಂತೆ ಚಿತ್ರರಂಗದ ಖ್ಯಾತ ನಾಯಕ ನಟರೊಂದಿಗೆ ಕೆಲಸ ಮಾಡಿದ ಹೆಗ್ಗಳಿಕೆ ನಮ್ಮದು ಎಂದು ಸ್ಮರಿಸಿದರು.
ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ನಿರೀಕ್ಷೆ ಮೀರಿ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಇದಕ್ಕಾಗಿ ಚಿತ್ರರಂಗ ಹಾಗೂ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈಗ ರಾಜಕೀಯಕ್ಕೆ ಏಕೆ ಪ್ರವೇಶ ಮಾಡಬೇಕು ಎಂಬ ಪ್ರಶ್ನೆಯನ್ನು ಹಲವರು ಕೇಳುತ್ತಿದ್ದಾರೆ. ಅದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ ಎಂದರು.
ಆದರೆ ಕಾಂಗ್ರೆಸ್ ಪಕ್ಷವನ್ನೇ ಏಕೆ ಸೇರಬೇಕಿತ್ತು ಎಂಬ ವಿಷಯಕ್ಕೆ ಬಂದರೆ ಭಾರತದ ಮಣ್ಣಿನಲ್ಲಿ ಹುಟ್ಟಿದ ಪ್ರತಿಯೊಬ್ಬರು ಕಾಂಗ್ರೆಸ್‍ಗೆ ಋಣಿಯಾಗಿರಬೇಕು. ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಪಕ್ಷ ಇದು.
ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟು ಹೋಗುವಾಗ ನಮ್ಮೆಲ್ಲ ಸಂಪತ್ತನ್ನು ದೋಚಿಕೊಂಡು ಹೋಗಿದ್ದರು. ತಿನ್ನುವ ಅನ್ನಕ್ಕೂ ಕಷ್ಟ ಇತ್ತು. ಆ ವೇಳೆ ಆಡಳಿತ ನಡೆಸಿದ ಕಾಂಗ್ರೆಸ್ ಅನ್ನ ಕೊಟ್ಟು, ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಸದೃಢ ದೇಶವನ್ನು ಕಟ್ಟಿಕೊಟ್ಟಿದೆ ಅದಕ್ಕಾಗಿ ಇದೇ ಪಕ್ಷಕ್ಕೆ ಸೇರಿದ್ದೇನೆ ಇಲ್ಲೇ ದುಡಿಯುತ್ತೇನೆ ಎಂದು ತಿಳಿಸಿದರು.

