ಮುಳಬಾಗಿಲು: ಪಟ್ಟಣದಲ್ಲಿ ಶ್ರೀರಾಮನವಮಿ ಹಿನ್ನೆಲೆಯಲ್ಲಿ ಶೋಭಾಯಾತ್ರೆ ನಡೆಯುತ್ತಿದ್ದ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿದೆ
ಮುಳಬಾಗಿಲಿನಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು ಆರು ಮಂದಿ ಶಂಕಿತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಸೂಕ್ಷ್ಮ ಪ್ರದೇಶಗಳಾದ ನಗರದ ಜಹಂಗೀರ್‍ಮೊಹಲ್ಲಾ, ಹೊಸಪಾಳ್ಯ, ಪಲ್ಲಿಗರಪಾಳ್ಯ, ಸೋಮೇಶ್ವರಪಾಳ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ಶೋಭಾಯಾತ್ರೆಯು ಶುಕ್ರವಾರ ಸಂಜೆ ನಗರದಿಂದ ಅವನಿ ಕಡೆಗೆ ಹೋಗುತ್ತಿತ್ತು ಪೊಲೀಸರು ಅಗತ್ಯ ಬಂದೋಬಸ್ತ್ ಮಾಡಿದ್ದರು.
ಆದರೂ ಸಹಾ ಶ್ರೀನಿವಾಸಪುರ ವೃತ್ತದ ಜಹಂಗೀರ್ ಮೊಹಲ್ಲಾ ಬಳಿ ಏಕಾಏಕಿ ವಿದ್ಯುತ್ ಸ್ಥಗಿತಗೊಳಿಸಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಪೊಲೀಸ್ ಸಿಬ್ಬಂದಿ ಸೇರಿದಂತೆ ಹತ್ತಾರು ಮಂದಿಗೆ ಗಾಯಗಳಾಗಿವೆ. ತಕ್ಷಣ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ದುಷ್ಕರ್ಮಿಗಳು ಸ್ಥಳದಲ್ಲಿದ್ದ ಕೆಲವು ಬೈಕ್‍ಗಳಿಗೆ ಬೆಂಕಿ ಹಚ್ಚಿದ್ದಾರೆ.
ಘಟನೆಯಿಂದ ಭಯಗೊಂಡ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು.
ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ಬಂದೋಬಸ್ತ್ ಮಾಡಿದ್ದಾರೆ.

