ರಾಜ್ಯದಲ್ಲೂ ಯು.ಪಿ.ಮಾದರಿ ಬುಲ್ಡೋಜರ್ ಕ್ರಮ ಬರಲಿ -ರೇಣುಕಾಚಾರ್ಯ ಆಗ್ರಹ

ಬೆಂಗಳೂರು: ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯದಲ್ಲೂ ಬುಲ್ಡೋಜರ್ ಕ್ರಮ ಜಾರಿಯಾಗಬೇಕು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ, ಸಾರ್ವಜನಿಕರ ಆಸ್ತಿ- ಪಾಸ್ತಿಗಳನ್ನು ಹಾಳು ಮಾಡುವ ದೇಶದ್ರೋಹಿಗಳಿಗೆ ಸೇರಿದ ಆಸ್ತಿಯನ್ನು ಬುಲ್ಡೋಜರ್ ಮೂಲಕ ತೆರವುಗೊಳಿಸಿ ವಶಕ್ಕೆ ಪಡೆಯಬೇಕು ಎಂದು ಟ್ವಿಟರ್ ನಲ್ಲಿ ಅವರು ಒತ್ತಾಯಿಸಿದ್ದಾರೆ.

ಕೆಲವು ಸೈತಾನರು ಈ ದೇಶದ ಕಾನೂನು ನಮ್ಮನ್ನು ಏನು ಮಾಡಲಾರದು ಎಂದುಕೊಂಡಿದ್ದಾರೆ.

ನಮ್ಮಲ್ಲಿರುವ ನಕಲಿ ಜಾತ್ಯಾತೀತ ಮನಸ್ಸುಗಳು ಇವರಿಗೆ ಕುಮ್ಮಕ್ಕು ನೀಡುತ್ತಿರುವುದರಿಂದಲೇ ಇವರ ಆಟಾಟೋಪಕ್ಕೆ ಕಡಿವಾಣ ಹಾಕುವವರು ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾನೂನುಬಾಹಿರ ಚಟುವಟಿಕೆ ನಡೆಸುವ ಯಾವುದೇ ವ್ಯಕ್ತಿ ಇಲ್ಲವೇ ಸಂಘಟನೆಗಳಿಗೆ ಬುಲ್ಡೋಜರ್ ಮೂಲಕವೇ ತಕ್ಕ ಪಾಠ ಕಲಿಸಬೇಕು ಎಂದು ರಾಜ್ಯದ ಜನತೆಯ ಪರವಾಗಿ ವಿನಂತಿಸಿಕೊಳ್ಳುವೆ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಗೂಂಡಾಗಿರಿಗೆ ಪ್ರಚೋದನೆ ಕೊಟ್ಟು ಓಡಿಹೋದ ರಾಷ್ಟ್ರದ್ರೋಹಿ ಮೌಲ್ವಿ ಬಂಧನವಾಗಬೇಕು ಎಂದು ರೇಣುಕಾಚಾರ್ಯ ಒತ್ತಾಯಿಸಿದ್ದಾರೆ.